ಜಿ.ಪಂ ಸಾಮಾನ್ಯ ಸಭೆ: 802ಕೋಟಿ ರೂ. ಮುಂಗಡ ಪತ್ರಕ್ಕೆ ಅನುಮೋದನೆ

0
42
loading...

ಕನ್ನಡಮ್ಮ ಸುದ್ದಿ-ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್‍ನ 2018-19ನೇ ಸಾಲಿನಲ್ಲಿ ಒಟ್ಟು 802ಕೋಟಿ ರೂ. ಮೊತ್ತದ ಒಟ್ಟು ಆಯವ್ಯಯಕ್ಕೆ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಆಯವ್ಯಯವನ್ನು ಸಭೆಯಲ್ಲಿ ಮಂಡಿಸಿದರು. ಇದರಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ 270032.94 ಲಕ್ಷ, ತಾಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ ಲೆಕ್ಕ ಶೀರ್ಷಿಕೆಯಡಿ 53177.75 ಲಕ್ಷ ಹಾಗೂ ಗ್ರಾಮ ಪಂಚಾಯತ್ ಕಾರ್ಯಕ್ರಮಗಳಿಗೆ 66 ಲಕ್ಷ ಅನುದಾನ ಒದಗಿಸಿದ್ದು, 2018-19ನೇ ಸಾಲಿನಲ್ಲಿ ಯೋಜನೆ/ಯೋಜನೇತರ ಲೆಕ್ಕ ಶೀರ್ಷಿಕೆಯಡಿ ಪ್ರತ್ಯೇಕವಾದ ಯಾವುದೇ ಅನುದಾನ ಒದಗಿಸಿರುವುದಿಲ್ಲ ಎಂದು ಅವರು ಹೇಳಿದರು.

ಯೋಜನೇತರ ಶೀರ್ಷಿಕೆಯಡಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿ ನೌಕರರ ವೇತನಕ್ಕಾಗಿ 548ಕೋಟಿ ರೂ. ಮೀಸಲಿಡಲಾಗಿದೆ. ಉಳಿದಂತೆ ಸಾಧಿಲ್ವಾರು ವೆಚ್ಚ ಮತ್ತು ಇತರೇ ವೆಚ್ಚಕ್ಕಾಗಿ ಜಿಲ್ಲಾ ಪಂಚಾಯತ್‍ಗೆ 13453.6 ಲಕ್ಷ ಮತ್ತು ತಾಲೂಕು ಪಂಚಾಯತ್‍ಗೆ 11914.75 ಲಕ್ಷ ಮೀಸಲಿಡಲಾಗಿದೆ. ಕೃಷಿ ಇಲಾಖೆಗೆ ಒಟ್ಟು 745.40 ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 9134.42 ಲಕ್ಷ, ಕೈಗಾರಿಕಾ ಇಲಾಖೆಗೆ ಒಟ್ಟು 65.18 ಲಕ್ಷ, ಅನುದಾನ ಒದಗಿಸಲಾಗಿದೆ ಎಂದರು.
ತರಗತಿಗೊಂದು ಶಿಕ್ಷಕರ ನೇಮಕಕ್ಕೆ ಒತ್ತಾಯ: ತರಗತಿಗೊಬ್ಬ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಸರ್ಕಾರಿ ಶಾಲೆಗಳಿಗೆ ಕ್ಲರ್ಕ್ ತುಂಬಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ನಗರಬಸ್ತಿಕೇರಿ ಭಾಗದ ಜಿ.ಪಂ. ಸದಸ್ಯೆ ಪುಷ್ಪಾ ನಾಯ್ಕ, ಶಿರಸಿ ಗ್ರಾಮೀಣ ಭಾಗದ ಸದಸ್ಯರಾದ ಜಿ.ಎನ್.ಹೆಗಡೆ ಮುರೇಗಾರ ಸಭೆಯಲ್ಲಿ ಆಗ್ರಹಿಸಿದರು.
ಈ ಸಂಬಂಧ ವಿಷಯನ್ನು ಮೊದಲು ಸಭೆಯಲ್ಲಿ ಪುಷ್ಪಾ ನಾಯ್ಕ ಪ್ರಸ್ತಾಪಿಸಿದರು. ಶಿಕ್ಷಣ ಇಲಾಖೆಗಳ ಮೇಲೆ ಚರ್ಚೆ ನಡೆಯುತ್ತಿದ್ದಾಗ ಶಿಕ್ಷರ ಕೊರತೆ ನೀಗಿಸುವ ಪ್ರಶ್ನೆ ಎತ್ತಿದರು.

ಶಿಕ್ಷಕರಿಗೆ ದಾಖಲಾತಿ, ಇತರೆ ಕಾರ್ಯಕ್ರಮ ದಲ್ಲಿ ಒತ್ತಡ ಹಾಕದೇ ಪಾಠ ಮಾಡಲು ಬಿಡಿ ಎಂದು ಪುಷ್ಪಾ ನಾಯ್ಕ ಹಾಗೂ ಮುರೇಗಾರ ಆಗ್ರಹಿಸಿದರು.
ಮಕ್ಕಳ ಸಂಖ್ಯೆ ಆಧರಿಸಿ ಶಿಕ್ಷಕರು ಬೇಡ. ವಿಷಯಕ್ಕೆ ಒಬ್ಬರಂತೆ ಶಿಕ್ಷಕರು ಇರಲಿ. 7 ತರಗತಿ ಇದ್ದರೆ 7 ಜನ ಶಿಕ್ಷಕರು ಕೊಡಲು ಸರ್ಕಾರ ಕ್ಕೆ ಜಿ.ಪಂ.ನಿಂದ ಪ್ರಸ್ತಾವನೆ ಹೋಗಲಿ ಎಂದಾಗ ಸಭೆ ವಿರೋಧವಿಲ್ಲದೇ ಠರಾವು ಅಂಗೀಕಾರವಾಯಿತು.

ಈಗಾಗಲೇ ಸರ್ಕಾರಿ ಶಾಲೆಗಳಿರುವಲ್ಲಿ 1 ಕಿ.ಮೀ. ಅಂತರದಲ್ಲಿ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವಂತಿಲ್ಲ. ಇದನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಅಧಿಕಾರಿಗಳನ್ನು ಪುಷ್ಪಾ ನಾಯ್ಕ ಆಗ್ರಹಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಆರ್.ಜಿ.ನಾಯಕ, ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

loading...