ಜೂ.4 ರಿಂದ ಸಮಗ್ರ ಕೃಷಿ ಅಭಿಯಾನ ಆಯೋಜನೆ

0
14
loading...

ಶಿರಸಿ: ಕೃಷಿ ಇಲಾಖೆಯ ನಡಿಗೆ ರೈತರ ಬಾಗಿಲಿಗೆ’ ಘೋಷವಾಖ್ಯದೊಂದಿಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು ಹಾಗೂ ಏಕಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ಅನುಷ್ಠಾನಗೊಳಿಸಲು ಜೂನ್ 4 ರಿಂದ 13ರವರೆಗೆ ಶಿರಸಿ ತಾಲೂಕಿನಾದ್ಯಂತ ಸಮಗ್ರ ಕೃಷಿ ಅಭಿಯಾನ ಆಯೋಜಿಸಲಾಗಿದೆ.
ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ಕೆ.ವಿ.ಖೂರ್ಸೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿ, ಪ್ರತಿ ವರ್ಷದಂತೆ ಈ ಬಾರಿಯೂ ಶಿರಸಿ ತಾಲೂಕಿನಲ್ಲಿ ಸಮಗ್ರ ಕೃಷಿ ಅಭಿಯಾನ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಗ್ರಾಮ ಪಂಚಾಯ್ತಿವಾರು ಕಾರ್ಯತಂಡ ರಚಿಸಿ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ವಿವಿಧ ಯೊಜನೆಗಳನ್ನು ಬಿಂಬಿಸಿ ರೈತರಿಗೆ ಅಗತ್ಯ ಮಾಹಿತಿ ನೀಡಲಾಗುವುದು. ಹೋಬಳಿಯ ಕೇಂದ್ರ ಸ್ಥಾನದಲ್ಲಿ ಕೃಷಿ ವಸ್ತು ಪ್ರದರ್ಶನ, ರೈತರೊಂದಿಗೆ ಸಂವಾದ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸಲಿದ್ದಾರೆ ಎಂದರು.

ಜೂನ್ 4 ರಂದು ಬೆಳಿಗೆ 9.30 ಗಂಟೆಗೆ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಅಭಿಯಾನಕ್ಕೆ ಚಾಲನೆ ನೀಡುವರು. ಬನವಾಸಿ ರೈತ ಸಂಪರ್ಕ ಕೇಂದ್ರದ ಅಭಿಯಾನಕ್ಕೆ 5 ರಂದು ಬನವಾಸಿಯ ನಾಮದೇವ ಕಲ್ಯಾಣಮಂಟಪದಲ್ಲಿ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡುವರು. ಉಳಿದ ಹೋಬಳಿಯಲ್ಲಿ ಆಯಾ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಚಾಲನೆ ನೀಡಲಿದ್ದಾರೆ. ಜೂ.6ರಂದು ಬೆಳಿಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ರೈತ ಸಂವಾದ, ಜೂ.7ರಂದು ಗುಡ್ನಾಪುರದ ಸಮಾಜ ಮಂದಿರಲ್ಲಿ, ಜೂ.9ರಂದು ವಾನಳ್ಳಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಹಾಗೂ ಜೂ.13ರಂದು ದೇವನಳ್ಳಿ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ರೈತ ಸಂವಾದ ನಡೆಯಲಿದೆ ಎಂದರು.

loading...