ತಂಬಾಕು ಉತ್ಪಾದನೆ ನಿಯಂತ್ರಣ ಅಗತ್ಯ: ನ್ಯಾ.ವಿಠ್ಠಲ

0
15
loading...

ಕನ್ನಡಮ್ಮ ಸುದ್ದಿ-ಕಾರವಾರ: ತಂಬಾಕು ಉತ್ಪಾದನೆಯನ್ನು ನಿಯಂತ್ರಿಸುವ ಮೂಲಕ ತಂಬಾಕು ಸೇವನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ವಿಠ್ಠಲ ಧಾರವಾಡಕರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಗುರುವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಉದ್ಘಾಟಿಸಿ ಮಾತನಾಡಿ ತಂಬಾಕು ದುಷ್ಟಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಉಂಟಾಗಿದೆ. ಮೊದಲಿನಷ್ಟು ತಂಬಾಕು ಬೆಳೆಯನ್ನು ಬೆಳೆಯಲಾಗುತ್ತಿಲ್ಲ. ಇದು ಸಕರಾತ್ಮಕ ಬೆಳವಣಿಗೆಯಾಗಿದೆ. ತಂಬಾಕು ರಹಿತ ದಿನ ಕೇವಲ ಒಂದು ದಿನದ ಆಚರಣೆಗೆ ಮಾತ್ರವಲ್ಲ ಬದಲಾಗಿ ವರ್ಷವಿಡಿ ಆಚರಿಸುವಂತಹದ್ದಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿ ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳಿಗೆ ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ. ತಂಬಾಕು ಸೇವನೆಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಯುವ ಜನತೆಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಆಹಾರ ಪದಾರ್ಥಗಳಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿ ಕಾಯ್ದೆ ರೂಪಿಸಿದ್ದರೂ, ಅದರ ಉದ್ದೇಶ ವಿಫಲವಾಗುತ್ತಿದೆ. ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ ತಂಬಾಕು ಸೇವನೆ ನಿಯಂತ್ರಿಸಬಹುದಾಗಿದೆ. ತಂಬಾಕು ಸೇವನೆ ವಿರುದ್ಧ ಹಲವಾರು ಕಾನೂನು ಕಾಯ್ದೆಗಳಿದ್ದರೂ, ಜನರ ಸಹಭಾಗಿತ್ವದೊಂದಿಗೆ ಮಾತ್ರ ಇದರ ನಿಯಂತ್ರಣ ಸಾಧ್ಯ ಎಂದು ತಿಳಿಸಿದರು
ನ್ಯಾಯವಾದಿ ನಿತೀನ ರಾಯ್ಕರ ಮಾದಕ ದ್ರವ್ಯಗಳ ಅಧಿನಿಯಮ ಕುರಿತು ವಿಶೇಷ ಉಪನ್ಯಾಸ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಈಗಾಗಲೇ ಕಾಯ್ದೆ ಜಾರಿಗೊಳಿಸಿದೆ. ಇದರ ಪ್ರಕಾರ ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸಾರಿಗೆ, ಹೊಟೇಲ್, ಉದ್ಯಾನವನ, ಆಸ್ಪತ್ರೆ, ಶಾಲೆಗಳು ಇತ್ಯಾದಿ ಕಡೆಗಳಲ್ಲಿ ಧೂಮಪಾನ ಮಾಡಿದರೆ ರೂ. 200 ದಂಡ ವಿಧಿಸಲು ಅವಕಾಶವಿದೆ. 18ವರ್ಷದ ಒಳಗಿನವರಿಗೆ ತಂಬಾಕಿನ ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದ್ದು, ಇದರ ಉಲ್ಲಂಘನೆಗೆ ರೂ. 200ದಂಡ ವಿಧಿಸಲಾಗುವುದು. ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಡೆಸುತ್ತಿರುವುದು ಕಂಡು ಬಂದರೆ ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದರು.

ಜಿಲ್ಲಾ ಸರ್ವೇಕ್ಷಣ ಅಧಿಕಾರಿ ವಿನೋದ ಭೂತೆ ತಂಬಾಕು ಸೇವನೆಯಿಂದ ಆಗುವ ದುಷ್ಟಪರಿಣಾಮಗಳ ಕುರಿತು ಉಪನ್ಯಾಸ ನೀಡಿ ಯುವ ಜನತೆ ಜೀವನ ಆಯ್ಕೆ ಮಾಡಿಕೊಳ್ಳಬೇಕು ಹೊರತು ತಂಬಾಕನ್ನು ಆಯ್ಕೆ ಮಾಡಿಕೊಳ್ಳಬಾರದು. ತಂಬಾಕು ಸೇವನೆ ಹೃದಯ ಕಾಯಿಲೆಗೆ ಮುಖ್ಯ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ತಂಬಾಕು ಮತ್ತು ಹೃದಯ ಕಾಯಿಲೆಗಳು ಎಂಬುದು ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆಯ ಘೋಷವಾಕ್ಯವಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಶಿವಕುಮಾರ.ಬಿ, ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ, ಹೆಚ್ಚುವರಿ ಸಿವಿಲ್ ನಾಯಾಧೀಶ ವಿವೇಕ ಗ್ರಾಮೋಪಾದ್ಯೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...