ತಾಲೂಕು ಕೇಂದ್ರದಲ್ಲಿ ನಿರೂಪಯುಕ್ತ ಬಸ್‌ ನಿಲ್ದಾಣ

0
21
loading...

ರಬಕವಿ-ಬನಹಟ್ಟಿ: ಲಕ್ಷ ಜನಸಂಖ್ಯೆ ಮುಟ್ಟುವ ತುದಿಗಾಲಲ್ಲಿ ನಿಂತಿರುವ ರಬಕವಿ-ಬನಹಟ್ಟಿ ನೂತನ ತಾಲೂಕು ಕೇಂದ್ರದಲ್ಲಿ ಪ್ರಯಾಣಿಕರ ಹಿತ ದೃಷ್ಟಿಯಿಂದ ಯಾವುದೇ ಅಭಿವೃದ್ಧಿ ಕಾಣದೆ ನಿರುಪಯುಕ್ತ ಬಸ್‌ನಿಲ್ದಾಣದಂತಾಗುತ್ತಿರುವ ಬನಹಟ್ಟಿ ಬಸ್‌ ನಿಲ್ದಾಣವೇ ಸಾಕ್ಷಿ.
ಇಲ್ಲಿ ನಿತ್ಯ 309ಕ್ಕೂ ಅಧಿಕ ಬಸ್‌ಗಳ ಸಂಚಾರ ಇದ್ದರೂ, ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್‌ ನಿಲ್ದಾಣದ ತುಂಬೆಲ್ಲ ನೀರು ನಿಂತು ಕೊಳಚೆ ಪ್ರದೇಶದಂತೆ ಗಬ್ಬೆದ್ದು ನಾರುತ್ತಿದೆ. ಶೌಚಗ್ರಹಗಳ ಪರಿಸ್ಥಿತಿ ಹೇಳತೀರದು, ಇಲ್ಲಿ ಮೂಗು ಮುಚ್ಚಿಕೊಂಡರೂ ವಾಂತಿ ಬಂದಂತಾಗುತ್ತದೆ. ಎಲ್ಲಿದೆ ಸ್ವಚ್ಛತೆ ಎಂಬಂತಾಗಿದೆ. ಕೇವಲ 3 ಪುರಷರ ಶೌಚಗ್ರಹಗಳು, 5 ಮೂತ್ರಾಲಯಗಳು, ಮಹಿಳೆಯರಿಗೆ 2, 3 ಇದ್ದು. ಪ್ರಯಾಣಿಕರು ಮೂತ್ರಿ ಹಾಗೂ ಶೌಚಕ್ಕೆ ಹೋಗಬೇಕಾದರೆ ಇಲ್ಲಿ ಸರದಿಯಲ್ಲಿ ನಿಂತೇ ಹೋಗುವಂತಾ ಪರಿಸ್ಥಿತಿ ನಿಮಾರ್ಣವಾಗಿದೆ.
ಹಳೆ ಶೌಚಗ್ರಹಗಳಿಗೆ ವಿದ್ಯುತ್‌ ಸಂಪರ್ಕ ಸಂಪೂರ್ಣ ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಿದ್ದು, ಎಲ್ಲೆಂದರಲ್ಲಿ ವಿದ್ಯುತ್‌ ವೈರಗಳು ಹರಿದು ನೀರಿನಲ್ಲಿ ಬೀಳುವಂತಾ ಸ್ಥಿತಿಯಲ್ಲಿವೆ. ಸಂಜೆ ಅಥವಾ ರಾತ್ರಿಹೊತ್ತು ಪ್ರಯಾಣಿಕರು ಅರಿವಿಲ್ಲದೆ ಇಲ್ಲಿ ಹೋದರೆ ವಿದ್ಯುತ್ತಿನಿಂದ ತೊಂದರೆಯಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.
ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಪ್ರಯಾಣಿಕರು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ, ಬಸ್‌ಗಳು ನಿಲ್ಲುವ ವ್ಯವಸ್ಥೆ ಕೂಡಾ ಸರಿಯಿಲ್ಲ, ಎಲ್ಲೆಂದರೆಲ್ಲಿ ನಿಲ್ಲಿಸುವುದು ಮನಸ್ಸಿಗೆ ಬಂದಂತೆ ಹೋಗುವಂತಾ ವಾತಾವರಣ ಕೂಡಾ ನಿರ್ಮಾಣವಾಗಿದೆ. ಯಾವ ಬಸ್‌ ಯಾವ ಸ್ಥಳದಲ್ಲಿ ನಿಲ್ಲುತ್ತದೆ ಎಂಬ ಪ್ರಯಾಣಿಕರ ಗಮನಕ್ಕೆ ಬರುವಂತೆ ನಾಮಫಲಕಗಳಿಲ್ಲ. ಇದರಿಂದ ಹೊಸದಾಗಿ ಊರಿಗೆ ಬರುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳಿಯರ ಆರೋಪವಾಗಿದೆ.
ಜಿಲ್ಲೆಯಲ್ಲಿ ಅನೇಕ ಬಸ್‌ ನಿಲ್ದಾಣಗಳು ಸಾಕಷ್ಟು ಅಭಿವೃದ್ಧಿಯಾಗಿವೆ. ಈ ನೂತನ ತಾಲೂಕು ಕೇಂದ್ರದಲ್ಲಿ ಬನಹಟ್ಟಿ ಬಸ್‌ ನಿಲ್ದಾಣವನ್ನೂ ಕೂಡಾ ಮೇಲ್ದರ್ಜೆಗೇರಿಸಿ ನೂತನ ಬಸ್‌ ನಿಲ್ದಾಣ ನಿರ್ಮಿಸಬೇಕು. ಅವಳಿ ನಗರಗಳು ಕಾಟನ್‌ ಸೀರೆ ಉತ್ಪಾದನೆಯಲ್ಲಿ ದೇಶ ವಿದೇಶದಲ್ಲಿ ಹೆಸರು ಮಾಡಿದ ನಗರಗಳಾಗಿದ್ದರಿಂದ ಇಲ್ಲಿ ದೇಶದ ಅನೇಕ ಭಾಗಗಳಿಂದ ನಿತ್ಯ ಸಾವಿರಾರು ಸಗಟು ವ್ಯಾಪಾರಸ್ಥರು ಆಗಮಿಸುತ್ತಾರೆ. ಅವರು ಈ ಬಸ್‌ ನಿಲ್ದಾಣ ನೋಡಿದಾಗ ಮುಜುಗರ ಪಡುವಂತಾಗುತ್ತಿದೆ.
ನೆನೆಗುದಿಗೆ ಬಿದ್ದ ಶೌಚಾಲಯ: ಬನಹಟ್ಟಿ ಬಸ್‌ ನಿಲ್ದಾಣದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸುವ ಸಂಬಂಧ 18 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಂಡು ಎರಡು ವರ್ಷಗಳೇ ಗತಿಸಿವೆ. ಇಲ್ಲಿಯವರೆಗೂ ಕಾಮಗಾರಿ ಪ್ರಾರಂಭಗೊಳ್ಳದಿರುವದು ದುರದೃಷ್ಟಕರ ಸಂಗತಿಯಾಗಿದೆ. ಕೂಡಲೇ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಹೈಟೆಕ್‌ ಶೌಚಗೃಹ ನಿರ್ಮಾಣ ಮಾಡಬೇಕಾಗಿರುವದು ಸರ್ಕಾರದ ಜವಾಬ್ದಾರಿಯಾಗಿದೆ.

loading...