ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ – ಉಡುಪಿ, ಮಂಗಳೂರು ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ

0
27
loading...

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಪ್ರವೇಶ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಉಡುಪಿ ಮತ್ತು ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಮತ್ತು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸತತವಾಗಿ ಇಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಮಂಗಳೂರಿನಲ್ಲಿಯೂ ಇಂದು, ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಮುಖವಾಗಿ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಕಾಪುವಿನಲ್ಲಿ ಬಿರುಸಿನ ಮಳೆಯಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಾಡದೋಣಿ ಮೀನುಗಾರರಿಗೆ ಜಿಲ್ಲಾಡಳಿತ ಈಗಾಗಲೇ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ನಿನ್ನೆ ಸಂಜೆಯಿಂದ ನಿರಂತರ ಮಳೆ ಸುರಿಯುತ್ತಿದೆ. ಮಳೆಯಿಂದ ನದಿಗಳು ತುಂಬಿ ಹರಿಯುತ್ತಿವೆ.
ಅಲ್ಲದೆ, ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡು ಭಾಗ, ಹಾಸನ, ವಿಜಯಪುರ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ತಾಲೂಕುಗಳಲ್ಲೂ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಬೆಳಗಿನಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

loading...