ದಿ.ಕಾಶೀನಾಥ ನಾಯಕರಿಗೆ ಶ್ರದ್ಧಾಂಜಲಿ

0
14
loading...

ಕನ್ನಡಮ್ಮ ಸುದ್ದಿ-ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾಗಿದ್ದ ದಿ.ಕಾಶೀನಾಥ ನಾಯಕರವರ ಸಂಸ್ಮರಣೆ ಕಾರ್ಯಕ್ರಮ ಟ್ರಸ್ಟ್‍ನ ಆಶ್ರಯದಲ್ಲಿ ಜರುಗಿತು. ದಿ.ಕಾಶೀನಾಥ ನಾಯಕರವರ ಹಿತೈಷಿಗಳು, ಸಂಬಂಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು, ನುಡಿನಮನ-ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಡಾ||ಜಿ.ಜಿ.ಹೆಗಡೆ, ದಿ.ಕಾಶೀನಾಥ ನಾಯಕರವರ ಆತ್ಮೀಯ ಒಡನಾಟವನ್ನು ಸಭೆಗೆ ಹೇಳುತ್ತಾ, ಅತ್ಯುತ್ತಮ ತತ್ವಜ್ಞಾನಿ, ಅತ್ಯುತ್ತಮ ಸಮಾಜ ಸೇವಕ ಇಂದು ನಮ್ಮ ಪಾಲಿಗಿಲ್ಲ ಎಂಬುದೇ ಅತೀವ ನೋವು ತಂದಿದೆ ಎಂದರು.
ಸುರೇಶ ಭಟ್ಟ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೋಟರಿಯೊಂದಿಗೆ ತಮ್ಮ ಒಡನಾಟದಲ್ಲಿದ್ದ ಕಾಶೀನಾಥ ನಾಯಕರವರಿಗೆ ನುಡಿನಮನ ಸಲ್ಲಿಸಿದರು. ಕೊಂಕಣಿ ಅಕಾಡೆಮಿಯ ಅರುಣ ಉಭಯಕರ ಮಾತನಾಡಿ, ಅತ್ಯುತ್ತಮ ಸಂಘಟಕ, ಅತ್ಯುತ್ತಮ ಮಾರ್ಗದರ್ಶಕರನ್ನು ಕರೆದುಕೊಂಡ ನೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ನನಗೆ ಆಘಾತ ತಂದಿದೆ ಎನ್ನುತ್ತಾ ಗದ್ಗದಿತರಾದರು. ಸರಸ್ವತಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಸುಲೋಚನಾ ರಾವ್, ಶೈಕ್ಷಣಿಕ ಸಲಹೆಗಾರರಾದ ಶ್ರೀ ಆರ್.ಎಚ್.ದೇಶಭಂಡಾರಿ, ಶಿಕ್ಷಕ ಗಣೇಶ ಜೋಶಿ, ಶಿವಾನಂದ ಭಟ್ಟ ಮಾತನಾಡಿದರು. ಆದಿಚುಂಚನಗಿರಿ ಸಂಸ್ಥೆಯ ಕಾರ್ಯದರ್ಶಿ ವಿಷ್ಣು ಪಟಗಾರ ಮಾತನಾಡಿ, ಕುಮಟಾದ ಅತ್ಯುತ್ತಮ ಎಂಜಿನಿಯರ್ ಎಂದರೆ ಕಾಶೀನಾಥ ನಾಯಕರವರು ಎನ್ನುತ್ತಾ ಅವರ ಬಾಲ್ಯ ಹಾಗೂ ಅವರ ವೃತ್ತಿ ಜೀವನದ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು. ವ್ಯಕ್ತಿ ಯಾವ ರೀತಿ ಬದುಕಿದರು, ಯಾವ ವಿಷಯವನ್ನು ಕಲಿಸಿದರು, ಅವರ ಬದುಕಿನಲ್ಲಿ ನಾವು ಕಲಿಯಬೇಕಾಗಿದ್ದು ಏನು ಎಂಬುದನ್ನು ತಿಳಿದು ಬದುಕುವುದೇ ನಿಜವಾದ ಶ್ರದ್ಧಾಂಜಲಿ ಎಂಬುದಾಗಿ ತಿಳಿಸಿ ಕಾಶೀನಾಥ ನಾಯಕರವರ ಜೀವನಾದರ್ಶಗಳನ್ನು ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಜೊತೆಗಿನ ಅವರ ಒಡನಾಟವನ್ನು ನೆನೆಸಿ ವಿಶ್ವಸ್ಥರಾದ ರಮೇಶ ಪ್ರಭು ನುಡಿನಮನ ಸಲ್ಲಿಸಿದರು. ಹುಟ್ಟು ಆಕಸ್ಮಿಕ ಹಾಗೂ ಸಾವು ಅನಿವಾರ್ಯ ಎಂಬ ಮಾತಿದೆ. ಆದರೆ, ಈ ಸಾವು ಆಘಾತ ತಂದಿದೆ. ಶ್ರೀ ಕಾಶೀನಾಥ ನಾಯಕ ನುಡಿದಂತೆ ನಡೆದವರು, ನಡೆದಂತೆ ನುಡಿದವರು ಎನ್ನುತ್ತಾ, 1975 ರಿಂದ ಆತ್ಮೀಯ ಒಡನಾಟ ಹೊಂದಿದ ದಿನಗಳನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ನೆನೆಸಿದರು. ಪ್ರತಿಯೊಂದೂ ಕಾರ್ಯದಲ್ಲಿ ಅವರನ್ನು ಅನುಸರಿಸಬಹುದು. ಊಟದ ಸವಿಯನ್ನು ಸವಿಯುವಾಗಲೂ ಸಹ ಅವರು ಅದರ ಪ್ರತೀ ಕ್ಷಣವನ್ನು ಆನಂದಿಸುತ್ತಿದ್ದರು. ಸಂಸ್ಥೆಯ ಕಾರ್ಯದರ್ಶಿಯಾಗಿ ಅವರನ್ನು ಭೇಟಿಮಾಡುತ್ತಿದ್ದೆ. ಸಂಸ್ಥೆಯ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಹಿರಿಯ ಚೇತನ ನಮ್ಮನ್ನು ಅಗಲಿದ್ದಾರೆ ಎಂಬುದು ಮನಸ್ಸಿಗೆ ಅತೀವ ನೋವು ತಂದಿದೆ ಎಂದರು. ರಾಜ ಅಳಿದರೂ ರಾಜತ್ವ ಮುಂದುವರಿಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದ ಕಾಶೀನಾಥ ನಾಯಕರವರು ನಮ್ಮ ಜೊತೆಗಿದ್ದು, ಯಾವಾಗಲೂ ಹರಸುತ್ತಾರೆ ಎಂಬುದನ್ನು ಆಶಿಸುತ್ತ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿಗಳಾದ ಶೇಷಗಿರಿ ಶಾನಭಾಗ, ವಿಶ್ವಸ್ಥರಾದ ಡಿ.ಡಿ.ಕಾಮತ, ದಾಸಾ ಶಾನಭಾಗ, ರಾಮನಾಥ ಕಿಣಿ, ನಾಗೇಶ ಶಾನಭಾಗ, ಬೀರಣ್ಣ ನಾಯಕ, ಡಾ. ವೆಂಕಟೇಶ ಶಾನಭಾಗ, ಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...