ದೇವೆಗೌಡರದು ವಚನಭೃಷ್ಟ ಕುಟುಂಬ: ಸಿದ್ದು ಸವದಿ ಆರೋಪ

0
8
loading...

ಕನ್ನಡಮ್ಮ ಸುದ್ದಿ-ತೇರದಾಳ: ಈ ಹಿಂದೆ ಬಿಜೆಪಿಗೆ ಅಧಿಕಾರ ಕೊಡುವಲ್ಲಿ ಮಾತು ತಪ್ಪಿದ್ದ ದೇವೆಗೌಡರ ಕುಟುಂಬ, ಇಂದು ಸಾಲ ಮನ್ನಾ ಮಾಡುವಲ್ಲಿಯು ಸಹಿತ ಮಾತು ತಪ್ಪುವುದರ ಮೂಲಕ ತಮ್ಮದು ವಚನಭೃಷ್ಟ ಕುಟುಂಬವೆಂಬುದನ್ನು ಮತ್ತೆ ಸಾಬೀತು ಮಾಡಿದೆ ಎಂದು ತೇರದಾಳದ ನೂತನ ಶಾಸಕ ಸಿದ್ದು ಸವದಿ ಆರೋಪಿಸಿದರು.
ಪಟ್ಟಣದ ಅಲ್ಲಮಪ್ರಭು ದೇವಸ್ಥಾನದಲ್ಲಿ ನಡೆದ ಕಾರ್ಯಕರ್ತರ ಅಭಿನಂದನೆ ಹಾಗೂ ಶಾಸಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತ ರಾಜ್ಯದ ಜನರ ಮುಲಾಜಿನಲ್ಲಿ, ಕಾಂಗ್ರೆಸ್‍ನ ಮುಲಾಜಿನಲ್ಲಿ ಇದ್ದೇವೆಂದು ನಾಚಿಕೆಗೇಡಿನ ಮಾತನಾಡುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಜನ ಮತ ನೀಡದೇ ಶಾಸಕರಾಗಿ, ಮುಖ್ಯಮಂತ್ರಿಯಾದರೇ ಎಂದು ಪ್ರಶ್ನಿಸುತ್ತ, ರಾಜ್ಯದಲ್ಲಿ ಜಾತಿ ವಿಷಬೀಜ ಬಿತ್ತಿ ಸಮಾಜಗಳನ್ನು ಒಡೆದು ಮತ ಪಡೆಯಲು ಹೋದ ಕಾಂಗ್ರೆಸ್ ಇಂದು ಧೂಳಿಪಟವಾಗಿದೆ. ರಾಜ್ಯ ಲೂಟಿ ಮಾಡಿದವರು ಸೇರಿಕೊಂಡು ಬಿಜೆಪಿ ದೂರವಿರಿಸಿ ಸರ್ಕಾರ ರಚಿಸಿದರು ಆದರೆ ಅದು ಇಂದು ಕೋಮಾವಸ್ಥೆಯಲ್ಲಿದೆ. ಹಿಂದಿನ ಶಾಸಕರಿಂದ ತೇರದಾಳ ಮತಕ್ಷೇತ್ರ ಸಮಸ್ಯೆಗಳ ಆಗರವಾಗಿದ್ದು, ಹಂತಹಂತವಾಗಿ ಅಭಿವೃದ್ಧಿ ಕೆಲಸ ಮಾಡಿ ಮಾದರಿ ಕ್ಷೇತ್ರ ಮಾಡುವುದಾಗಿ ಹೇಳಿದರು. ಪ್ರಫುಲ್ ದೇಶಪಾಂಡೆ, ಶಿವಾನಂದ ಬಡಿಗೇರ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಗಂಗಾಧರ ದೇವರು ಆಶೀರ್ವಚಿಸಿದರು. ಚುನಾವಣೆಯಲ್ಲಿ ಶಾಸಕರ ಬೃಹತ್ ಗೆಲುವಿಗೆ ಕಾರಣರಾದ ಹಲವು ಸ್ಥರದ ಕಾರ್ಯಕರ್ತರನ್ನು ಸತ್ಕರಿಸಲಾಯಿತು. ನೀಟ್ ಪರಿಕ್ಷೆಯಲ್ಲಿ ದೇಶಕ್ಕೆ 280ನೇ ರ್ಯಾಂಕ್ ಪಡೆದ ಪಟ್ಟಣದ ವಿದ್ಯಾರ್ಥಿ ಮಂಜುನಾಥ ಡೊಂಬರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪುರಸಭೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನೂತನ ಶಾಸಕರನ್ನು ಸತ್ಕರಿಸಿದರು. ಪುರಸಭೆ ಅಧ್ಯಕ್ಷೆ ಸುವರ್ಣಾ ಹಿರೇಕುರುಬರ, ಉಪಾಧ್ಯಕ್ಷೆ ನಿಂಬೆವ್ವ ದೊಡಮನಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಭಾಕರ ಬಾಗಿ, ಮಹಾವೀರ ಕೊಕಟನೂರ, ಸದಾಶಿವ ದೊಡಮನಿ ವೆದಿಕೆಯಲ್ಲಿದ್ದರು. ಈಶ್ವರ ಯಲ್ಲಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

loading...