ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ಥ

0
43
loading...

ನರಗುಂದ: ನಾಲ್ಕು ದಿನಗಳಿಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೆಚ್ಚಿನ ಮಳೆ ಬೀಳಲಾರಂಭಿಸಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ.
ಜೂ. 2 ರ ಬೆಳಗಿನ ಜಾವ ಸುರಿದ ಮಳೆಯಿಂದ ಪಟ್ಟಣದ ಕಸಬಾ ಬಡಾವಣೆಯ ಜನನಿಬಿಡ ಪ್ರದೇಶದಲ್ಲಿಯ ಆಲದ ಮರವೊಂದು ನೆಲಕ್ಕುರುಳಿ ಬಿದ್ದ ಪರಿಣಾಮ ಬೆಳಿಗ್ಗೆ ಎರಡು ತಾಸುಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪುರಸಭೆಯವರು ಹಾಗೂ ಹೆಸ್ಕಾಂ ಇಲಾಖೆಯವರು ಬಿದ್ದ ಗಿಡದ ಟೊಂಗೆಗಳ

ತೆರವು ಕಾರ್ಯಾಚರಣೆ ನಡೆಸಿದರು. ಜನನಿಬಿಡ ಪ್ರದೇಶವಾಗಿದ್ದರಿಂದ ಬೆಳಿಗ್ಗೆ 9 ಗಂಟೆಯಿಂದ ಮರ ಬಿದ್ದ ಭಾಗದಲ್ಲಿ ಅನೇಕರು ತರಕಾರಿ ವ್ಯಾಪಾರಸ್ಥರು ನಿತ್ಯ ಮಾರಾಟಮಾಡುವ ಕೆಲಸ ನಡೆಸುತ್ತಿದ್ದಾರೆ. ಆದರೆ ಮರ ಬಿದ್ದ ಸಂದರ್ಭದಲ್ಲಿ ಆ ಜಾಗದಲ್ಲಿ ಯಾರೂ ಇಲ್ಲದ್ದರಿಂದ ಹೆಚ್ಚಿನ ಅವಘಡ ತಪ್ಪಿದಂತಾಗಿದೆ.
ಮರ ಉರುಳಿ ಬಿದ್ದ ಮಾಹಿತಿ ಅರಿತ ಪುರಸಭೆ ಸಿಬ್ಬಂಧಿ ಮತ್ತು ಹೆಸ್ಕಾಂದವರು ಮರದ ಟೊಂಗೆಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಗಿಡದ ಟೊಂಗೆಗಳನ್ನು ತೆರವುಗೊಳಿಸಲು ಸುಮಾರು ಎರಡು ತಾಸು ಗತಿಸಿದ್ದರಿಂದ ಆಸಂದರ್ಭದಲ್ಲಿ ರಸ್ತೆ ಸಂಚಾರ ತಟಸ್ಥಗೊಂಡಿತ್ತು. ಪಟ್ಟಣದ ಆ ಭಾಗದಲ್ಲಿ ಬೆಳಗಿನಿಂದ ಐದು ತಾಸು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆ ಸಮೀಪದಲ್ಲಿರುವ ಐ.ಆರ್. ಹಡಗಲಿ ಅವರ ನಿವಾಸ ಸೇರಿದಂತೆ ಅರಿಷಿನಗೋಡೆಯ ಗೋವಿಂದರಡ್ಡಿ ಮೇಟಿಯವರ ಗ್ಯಾರೇಜ ಹಾಗೂ ಸುಮಾರು ನಾಲ್ಕಾರು ಮನೆಗಳ ಸುತ್ತ ಹೆಚ್ಚಿನ ನೀರು ಸಂಗ್ರಹಗೊಂಡಿದ್ದರಿಂದ ಆ ಮನೆಗಳ ನಿವಾಸಿಗರು ತೊಂದರೆ ಅನುಭವಿಸಿದರು. ಜೂ. 2 ರಂದು ಬೆಳಗಿನ ನಾಲ್ಕು ಗಂಟೆಗೆ ಹೆಚ್ಚಿನ ಮಳೆ ಬಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿತ್ತು. ಹೊರವಲಯದ ತಗ್ಗು ಪ್ರದೇಶವಿರುವ ಅನೇಕ ಮನೆಗಳು ಜಲಾವೃತಗೊಂಡು ನಿವಾಸಿಗರು ತೊಂದರೆ ಅನುಭವಿಸಿದರು.
ಕಂದಾಯ ಇಲಾಖೆಯವರು ಹೆಚ್ಚಿನ ಮಳೆಯಾಗಿರುವ ಪ್ರದೇಶಗಳ ನಿಖರ ಮಾಹಿತಿ ಪಡೆಯಲು ಕಳೆದ ನಾಲ್ಕಾರು ದಿನಗಳಿಂದ ನಿರ್ಲಕ್ಷಮಾಡುತ್ತಿದ್ದಾರೆ. ತಹಸೀಲ್ದಾರ ಆರ್.ವ್ಹಿ. ಕಟ್ಟಿಯವರಿಗೆ ತಿಳಿಸಿದರೂ ಸಹಿತ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಇಲಾಖೆ ಸಿಬ್ಬಂಧಿಯವರು ತಕ್ಷಣ ತೊಂದರೆಗೀಡಾದ ಮನೆಗಳ ಪರಿಶೀಲನೆ ಕೈಗೊಳ್ಳಲು ಹಿಂದೇಟುಹಾಕುತ್ತಿದ್ದಾರೆಂದು ಆಶ್ರಯ ನಿವಾಸಿಗರು ಹಾಗೂ ಮನೆಹಾನಿಗೊಂಡು ತೊಂದರೆ ಅನುಭವಿಸಿದ ಹನುಮಂತಪ್ಪ ಜಾಲಿಯವರ, ಮಕ್ತುಮ ಸಾಬಣ್ಣವರ, ತುಕಾರಾಂ ಜಾಡರ, ಅಯ್ಯಪ್ಪ ಕುರುಬರ, ಮಹದೇವಪ್ಪ ಅಮ್ಮನ್ನವರ, ಹಪೀಜಾ ಮುಲ್ಲಾನವರ, ರುಕ್ಮೀಣಿ ಜಾಧವ ಅನೇಕರು ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷವನ್ನು ಟೀಕೆ ಮಾಡಿದ್ದಾರೆ.
ಈ ಕುರಿತು ತಹಸೀಲ್ದಾರ ಆರ್.ವ್ಹಿ. ಕಟ್ಟಿ ವಿವರ ನೀಡಿ, ಕಳೆದ ಐದಾರು ದಿನಗಳಿಂದ ತಾಲೂಕಿನಲ್ಲಿ ಹೆಚ್ಚಿನ ಮಳೆ ಸುರಿಯಲಾರಂಭಿಸಿದೆ. ಮನೆಗಳಿಗೆ ಹಾನಿಯಾದ ಕುರಿತು ನಿಖರ ಮಾಹಿತಿ ಕಂದಾಯ ಇಲಾಖೆಯಿಂದ ಪಡೆಯಲಾಗುತ್ತಿದೆ. ಪಟ್ಟಣದ ದಂಡಾಪೂರ, ಸೋಮಾಪೂರ ಹಾಗೂ ಪೇಠ ಮತ್ತು ಅರ್ಬಾಣ ಬಡಾವಣೆಗಳಲ್ಲಿ ಇದುವರೆಗೆ 14 ಮನೆಗಳು ಬಾಗಶ: ಬಿದ್ದ ಮಾಹಿತಿ ದೊರೆತಿದೆ. ಹಾಲಬಾವಿ ಕೆರೆ ಸ್ಥಳದಲ್ಲಿಯ ನಿವಾಸಿಗರ ಕೆಲ ಮನೆಗಳು ಹಾನಿಯಾಗಿರುವ ಮಾಹಿತಿ ಇದೆ. ಈ ಸ್ಥಳ ಸರ್ಕಾರಿ ಜಾಗೆ ಆಗಿರುವುದರಿಂದ ಅವರಿಗೆ ಪರಿಹಾರ ಕೊಡಲು ನಿಯಮಾವಳಿಯಲ್ಲಿ ಇಲ್ಲ. ತಾಲೂಕಿನ ಮೂಗನೂರದಲ್ಲಿ 7 ಹಾಗೂ ಸುರಕೋಡದಲ್ಲಿ ಒಂದು ಮನೆ ಬಾಗಶ: ಬಿದುಕೊಂಡಿರುವ ಇದುವರೆಗಿನ ಮಾಹಿತಿ ಲಭ್ಯವಾಗಿದೆ. ಸಮೀಕ್ಷೆ ಕಾರ್ಯ ಕಂದಾಯ ಇಲಾಖೆಯಿಂದ ಕೈಗೊಂಡು ವಿಭಾಗಾಧಿಕಾರಿಗಳಿಗೆ ಹಾನಿಗೊಂಡ ಮನೆಗಳ ಸಂಪೂರ್ಣವಿವರ ನೀಡಲಾಗುವುದು. ಬಾಗಶ: ಬಿದ್ದ ಮನೆಗಳಿಗೆ 3200 ದಿಂದ 5200 ರೂ ವರೆಗೆ ಪರಿಹಾರ ನೀಡಬಹುದಾಗಿದೆ. ಪರಿಹಾರದ ಮೊತ್ತವನ್ನು ವಿಭಾಗಾಧಿಕಾರಿಗಳು ದೃಡಪಡಿಸುತ್ತಾರೆಂದು ತಹಸೀಲ್ದಾರ ಆರ್.ವ್ಹಿ. ಕಟ್ಟಿ ವಿವರ ನೀಡಿದ್ದಾರೆ.

loading...