ನಗರದಲ್ಲಿನ ಅನಧಿಕೃತ ಮಾದಕ ವಸ್ತುಗಳ ಮಾರಾಟ ನಿಷೇಧಿಸಿ:ಕೋರೆ       “ನೂತನ ಶಾಸಕರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಹೇಳಿಕೆ”

0
30
loading...


ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಕಾಮಗಾರಿಗಳು ಹಾಗೂ ಮಾದಕ ವಸ್ತುಗಳ ಮಾರಾಟವನ್ನು ನೂತನ ಶಾಸಕರು ನಿಷೇಧ ಮಾಡಬೇಕೆಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಸೋಮವಾರ ಬಿಜೆಪಿ ನೂತನ ಶಾಸಕರ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಬೇಕಾಯಿತು. ಕಾರ್ಯಕರ್ತರ ಹುಮ್ಮಸ್ಸಿನಿಂದ ಈ ಸಲ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ಈ ನಿಟ್ಟಿನಲ್ಲಿ ಶಾಸಕರಾಗಿ ಆಯ್ಕೆಯಾದವರು ನಗರದಲ್ಲಿ ಅನಧಿಕೃತ ಕಾಮಗಾರಿಗಳು ಹಾಗೂ ಗೂಡಂಡಿಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ಸಂಪೂರ್ಣ ನಿಷೇಧ ಮಾಡಬೇಕೆಂದು ಸೂಚನೆ ನೀಡಿದರು.
ಸಮೀಕ್ಷೆಗಳ ಪ್ರಕಾರ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತದೆ ಎಂದು ಹೇಳಿದ್ದರು. ಈ ಭಾಗದಲ್ಲಿ ಜನರು ಮತದಾನ ಮಾಡಲು ಹಮಸ್ಸು ಇದ್ದರು. ಕಾರ್ಯಕರ್ತರ ಯಶಸ್ವಿಯಾಗಿ ದುಡಿದ ಪರಿಣಾಮದಿಂದ ಬಿಜೆಪಿ ಗೆದ್ದಿದೆ. ಇದು ಒಂದು ಐತಿಹಾಸಿಕ ಗೆಲುವು. ಉತ್ತರದಲ್ಲಿ ಜಾತಿ, ಭಾಷೆ ಬಿಟ್ಟು ಬಿಜೆಪಿ ಗೆಲಿಸಿದ್ದಾರೆ. ಮೊದಲ ಸಲ 23 ಜನ ಮಹಾನಗರ ಪಾಲಿಕೆ ಸದಸ್ಯರು ಬೆನಕೆಗೆ ಬೆಂಬಲ ನೀಡಿದ್ದು ಬಿಜೆಪಿಗೆ ಮತಷ್ಟು ಬಲ ಬರಲು ಕಾರಣವಾಯಿತು ಎಂದರು.ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದಲ್ಲಿ ಚುರುಕಾಗಿ ಕೆಲಸ ಮಾಡಿ ನಿಮ್ಮನ್ನು ಶಾಸಕರನ್ನಾಗಿ ಮಾಡಿದ ಕಾರ್ಯಕರ್ತರನ್ನು ಮರೆಯದೆ ನಿರಂತರ ಸಂಪರ್ಕದೊಂದಿಗೆ ಕಾರ್ಯಕರ್ತರ ಕೆಲಸ ಮಾಡಬೇಕು. ಕಾರ್ಯಕರ್ತರ ಕಡೆಗಣೆ ಮಾಡಿದ್ದರಿಂದ ಜಿಲ್ಲೆಯಲ್ಲಿ ಕೆಲವೊಂದು ಕ್ಷೇತ್ರದಲ್ಲಿ ಬಿಜೆಪಿ ಸೋಲು ಅನುಭವಿಸಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮಲಿರುವ ಜಗಳದಿಂದ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಸೋಲು ಅನುಭವಿಸಬೇಕಾಗಿತ್ತು. ಆದರೆ ಈ ಸಲ ನಗರದಲ್ಲಿ ಅಂದುಕೊಂಡಂತೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ ಎಂದರು.
ರಾಜ್ಯದಲ್ಲಿ 34 ಕ್ಷೇತ್ರಗಳನ್ನು ಗೆದ್ದ ಜೆಡಿಎಸ್ ಹಾಗೂ 78 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ನಡೆಸುತ್ತಿವೆ. 104 ಕ್ಷೇತ್ರಗಳನ್ನು ಗೆಲವು ಸಾಧಿಸಿದ ಬಿಜೆಪಿ ವಿರೋಧ ಪಕ್ಷದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕರ್ನಾಟದಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ ಮುಕ್ತವಾದಂತೆ ಸೋಲಿನ ಹತಾಶೆಯಲ್ಲಿ ಜೆಡಿಎಸ್‍ನವರೊಂದಿಗೆ ಮೈತ್ರಿ ಮಾಡಿಕೊಂಡ ಸರಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸ್ಸು ಗರೀಬಿ ಹಟಾವೋ, ಕಿಸಾನ್ ಕೋ ಬಜಾವೋ ಮಾಡುತ್ತಿದ್ದಾರೆ. 184 ಕೋಟಿ ರೂ ಫಸಲ ಭೀಮಾ ಯೋಜನೆ ಹಣ ರೈತರಿಗೆ ನೀಡಿದ್ದೇವೆ. ನಗರದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಬೇಕು. ಯುವಕರಿಗೆ ಕೇಂದ್ರ ಸರಕಾರ ಯೋಜನೆ ಬಳಕೆ ಮಾಡುವಂತೆ ನೂತನ ಶಾಸಕರು ನೋಡಿಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದರೆ ಹೆಚ್ಚು ಕೆಲಸ ಆಗುತ್ತವೆ ಎಂದರು.
ಕಳೆದ 60 ವರ್ಷ ಭಾರತ ದೇಶವನ್ನು ಆಳಿದ ಕಾಂಗ್ರೆಸ್ ಲೂಟಿ ಮಾಡಿದೆ. ಆದರೆ ನಾಲ್ಕು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕತೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ಪ್ರಧಾನಿ ಆಶಯದಂತೆ ಭಾರತದಲ್ಲಿ ವಿರೋಧ ಪಕ್ಷ ಬೇಕು. ಆದರೆ ಕಾಂಗ್ರೆಸ್ ಬೇಡ. 25 ವರ್ಷದ ಹಿಂದೆ ಒಬ್ಬರು ಬಿಜೆಪಿ ಶಾಸಕರಿರಲಿಲ್ಲ. ಆದರೆ ಇವತ್ತು ದೇಶದಲ್ಲಿ 21 ರಾಜ್ಯಗಳಲ್ಲಿ ಬಂದ ಬಿಜೆಪಿ ಅಧಿಕಾರದಲ್ಲಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷದಿಂದ ಅಭ್ರ್ಯಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಬೆಳಗಾವಿಯನ್ನು ಸಂಪೂರ್ಣವಾಗಿ ಬಿಜೆಪಿ ಹಿಡಿತಕ್ಕೆ ತೆಗೆದುಕೊಂಡಿದ್ದೇವೆ ಎಂದರು.
ಶಾಸಕ ಅನಿಲ ಬೆನಕೆ ಮಾತನಾಡಿ, ವಿಧಾನಸಭೆ ಬಿಜೆಪಿ ಪಡೆದ ಮತಗಳಿಗಿಂತ ಎರಡಪಟ್ಟು ಹೆಚ್ಚು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ ಪಡೆಯಲು ಪ್ರಯತ್ನಿಸುತ್ತೇವೆ. ಬೆಳಗಾವಿ ಕಾಂಗ್ರೆಸ್ ಮುಕ್ತ ಮಾಡಲು ಕಾರ್ಯಕರ್ತರು ಶ್ರಮಿಸಿದ್ದಿರಿ. ನಮ್ಮ ಕಡೆಯಿಂದ ತಪ್ಪುಗಳು ಆದರೆ ನೇರವಾಗಿ ಹೇಳಿ ತಿದ್ದಿಕೊಳ್ಳುತ್ತೇವೆ. ಎಲ್ಲರೂ ಸೇರಿ ಮಹಾನಗರವನ್ನು ಮಾದರಿ ನಗರ ಮಾಡೋಣ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ನಗರ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್‍ಸಿಟಿಗೆ ಆಯ್ಕೆಯಾಗಿದೆ. ಆದರೆ ಹೇಳಿಕೊಳ್ಳುವಷ್ಟು ಕಾಮಗಾರಿಗಳು ನಡೆದಿಲ್ಲ. ಈಗಾಗಲೇ ಸಾಂಬ್ರಾ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿದೆ. ಇಲ್ಲಿ ಆದಷ್ಟು ಬೇಗ ಉಡಾನ್ ಸೇವೆ ಆರಂಭಿಸಲು 48 ಶಾಸಕರ ಸಹಿ ಸಂಗ್ರಹ ಮಾಡಿದ್ದೆನೆ. ಸದನದಲ್ಲಿ ಈ ಕುರಿತು ಚರ್ಚೆ ನಡೆಸಿ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಬೆಳಗಾವಿಯಲ್ಲಿ ಉಡಾನ್ ಸೇವೆ ಆರಂಭಿಸುವುದಾಗಿ ಭರವಸೆ ನೀಡಿದರು.

ಮಹಾನಗರ ಬಿಜೆಪಿ ಅಧ್ಯಕ್ಷ ರಾಜೇಂದ್ರ ಹರಕುಣಿ, ದೀಪಕ ಜಮಖಂಡಿ, ಶಶಿಕಾಂತ ಪಾಟೀಲ, ಲೀನಾ ಟೋಪ್ಪನವರ, ರಾಜು ಚಿಕ್ಕನಗೌಡರ, ಮುತ್ತಾಲಿಕ್, ಮಂಗೇಶ ಪವಾರ, ಶಶಿಕಾಂತ ಪಾಟೀಲ, ಮುಕ್ತಾರ್ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...