ನಗರಸಭೆಯವರ ನಿರ್ಲಕ್ಷ್ಯದಿಂದ ರಸ್ತೆಗೆ ಪೋಲಾಗುತ್ತಿರುವ ನೀರು

0
45
loading...

ಶಿರಸಿ: ನೀರಿನ ಮಿತ ಬಳಕೆ ಬಗ್ಗೆ ಸರ್ಕಾರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಒಂದೆಡೆಯಾದರೆ ಅದೇ ಸರ್ಕಾರದ ಭಾಗವಾದ ನಗರಸಭೆಯವರ ನಿರ್ಲಕ್ಷದಿಂದ ಶಿರಸಿ ನಗರಕ್ಕೆ ಬರಬೇಕಾಗಿದ್ದ ಸಾವಿರಾರು ಲೀಟರ್ ನೀರು ಯಾರಿಗೂ ಇಲ್ಲದಂತೆ ಪೋಲಾಗಿ ರಸ್ತೆಯ ಮೇಲೆ ಹರಿಯುತ್ತಿದೆ.
ತಾಲೂಕಿನ ಯಡಳ್ಳಿ ಸಮೀಪದ ಕಲಕೈ ಕ್ರಾಸ್ ಬಳಿಯಲ್ಲಿ ಮಾರಿಗದ್ದೆ ಜಲಾಗಾರದಿಂದ ಬರುವ ನೀರಿನ ಪೈಪ್ ಲೈನ್‍ನಲ್ಲಿ ಸೋರಿಕೆಯಾಗಿದ್ದು, ಯಾರಿಗೂ ಇಲ್ಲದಂತೆ ರಸ್ತೆಯ ಮೇಲೆ ನೀರು ಪೋಲಾಗಿದೆ. ಆದರೂ ನಗರಸಭೆಯ ಸಿಬ್ಬಂದಿ ಮಾತ್ರ ತಮಗೇನೂ ಸಂಬಂಧ ಇಲ್ಲ ಎನ್ನುವಂತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ದಿನವಾದ ಕಾರಣ ಎಲ್ಲಾ ಕಡೆಗಳಲ್ಲಿ ನೀರಿನ ಹಾಹಾಕಾರ ಎದ್ದಿದೆ. ನಗರ ವಾಸಿಗಳಿಗೆ ಎರಡು ದಿನಗಳಿಗೊಮ್ಮೆ ನೀರು ನೀಡಲಾಗುತ್ತಿದೆ. ಈ ಕಾರಣಕ್ಕಾಗಿ ಅವರಿಂದ ಪ್ರತಿ ತಿಂಗಳಿಗೆ ಸುಮಾರು 180 ರೂ.ಗಳನ್ನು ವಸೂಲಿ ಮಾಡಲಾಗುತ್ತದೆ. ಆದರೆ ನೀರಿನ ಮಹತ್ವ ತಿಳಿಯದವರಂತೆ ನಗರಸಭೆ ವರ್ತಿಸುತ್ತಿದ್ದು, ಮಾರಿಗದ್ದೆಯಿಂದ ಬರುವ ನೀರು ಪೋಲಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ ಎನ್ನುತ್ತಾರೆ ನಗರವಾಸಿ ಗಣೇಶ ಗೌಡ.
ಗ್ರಾಮೀಣ ಪ್ರದೇಶಗಳಾದ ಕೆಂಗ್ರೆ ಮತ್ತು ಮಾರಿಗದ್ದೆ ಜಲಾಗಾರದಿಂದ ನಗರವಾಸಿಗಳಿಗೆ ನೀರಿನ ಸರಬರಾಜು ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಭಾಗದ ಕೃಷಿ ಪ್ರದೇಶಗಳಿಗೆ ನೀರಿನ ಕೊರತೆ ಉಂಟಾಗಿ ಹಳ್ಳಿಗರ ಆಕ್ರೋಶಕ್ಕೂ ನಗರಸಭೆ ತುತ್ತಾಗಿದೆ. ಆದರೆ ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ಎಂದು ಕಾನೂನು ಹೇಳಿಕೊಂಡು ನಗರಸಭೆ ನೀರಿನ ಸರಬರಾಜು ಮಾಡುತ್ತಿದೆ. ಇಷ್ಟೆಲ್ಲಾ ಆಗಿ ಆ ನೀರಿನ ಸದ್ಬಳಕೆ ಮಾಡಿದ್ದರೆ ಅದಕ್ಕೆ ಯಾರಿಂದಲೂ ತಕರಾರು ಬರುತ್ತಿರಲಿಲ್ಲ. ಆದರೆ ಪೈಪ್ ಲೈನ್‍ನಲ್ಲಿ ಸೋರಿಕೆ ಆಗಿ ಯಾರಿಗೂ ಇಲ್ಲದಂತೆ ನೀರು ಗಟಾರ, ರಸ್ತೆಯ ಮೇಲೆ ಹರಿಯುತ್ತಿರುವ ಕಾರಣ ಅಲ್ಲಿನ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಯಡಳ್ಳಿ ಭಾಗದ ಸ್ಥಳೀಕರು ಹೇಳುವ ಪ್ರಕಾರ, ನೀರು ಪೋಲಾಗುತ್ತಿದ್ದರೂ ನಗರಸಭೆಯ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಪ್ರತಿ ದಿವಸವೂ ಸಹ ನೀರಿನ ಸರಬರಾಜಿನ ಪೈಪ್ ಲೈನ್ ಪರಿಶೀಲನೆ ನಡೆಯಬೇಕು ಹಾಗೂ ಇನ್ನು ಮುಂದಿನ ದಿನಗಳಲ್ಲಿ ಒಂದು ತೊಟ್ಟು ನೀರೂ ಸಹ ಪೊಲಾಗದಂತೆ ನಗರಸಭೆ ನೋಡಿಕೊಳ್ಳಬೇಕು ಎಂದು ಸ್ಥಳಿಕ ಮಂಜುನಾಥ ನಾಯ್ಕ ಆಗ್ರಹಿಸಿದ್ದಾರೆ.

loading...