‘ನಮ್ಮ ಗ್ರಾಮ ನಮ್ಮ ಯೋಜನೆ’ ಜನಪ್ರತಿನಿಧಿಗಳಿಗಾಗಿ ಕಾರ್ಯಾಗಾರ

0
18
loading...

ಗದಗ: ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯತಗಳಲ್ಲಿ ಅನೇಕ ಯೋಜನೆಗಳಿದ್ದು ಇವುಗಳ ಸರಿಯಾದ ಅನುಷ್ಠಾನದಿಂದ ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.
ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಪಂಚಾಯತ ರಾಜ್‌ ವ್ಯವಸ್ಥೆಯಲ್ಲಿ ವಿಕೇಂದ್ರಿಕೃತ ಯೋಜನಾ ಪ್ರಕ್ರಿಯೆ ಹಾಗೂ ಅನುಷ್ಠಾನದಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆ ಕುರಿತು ಜನಪ್ರತಿನಿಧಿಗಳಿಗಾಗಿ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಾರ್ವಜನಿಕರ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕರೆ ನೀಡಿದರು. ಪ್ರತಿ ಗ್ರಾಮಗಳಲ್ಲಿ ಹಸಿರಿನ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಪಂಚಾಯತಿಗಳಲ್ಲಿ ಮರ ನೆಡುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ ಕುರಡಗಿ ಮಾತನಾಡಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಗ್ರಾಮ ನಮ್ಮ ಯೋಜನೆ ಕಾರ್ಯಕ್ರಮವು ಅತ್ಯಂತ ಪ್ರಮುಖವಾಗಿದೆ. ಈ ವ್ಯವಸ್ಥೆಯು ತಳಮಟ್ಟದಿಂದ ಸಂಪೂರ್ಣ ಅನುಷ್ಠಾನಗೊಂಡಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೇರಳದ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ವಿಜಯಾನಂದ ಯೋಜನೆ ಕುರಿತು ಮಾತನಾಡಿ ಗ್ರಾಮಗಳ ಅಭಿವೃದ್ಧಿಗಾಗಿ ಸರಕಾರದಿಂದ ಅನೇಕ ಯೋಜನೆಗಳ ಜೊತೆಗೆ ಸಾಕಷ್ಟು ಅನುದಾನವು ದೊರಕುತ್ತದೆ. ಗ್ರಾಮಗಳ ಅಭಿವೃದ್ಧಿಗೆ ಪ್ರಮುಖವಾಗಿ ಯೋಜನೆಗಳನ್ನು ರೂಪಿಸಲು ಜನಪ್ರತಿನಿಧಿಗಳು ಸ್ಥಳೀಯರು ಪಾಲ್ಗೊಳ್ಳುವುದು ಅತೀ ಅವಶ್ಯಕವಾಗಿದೆ ಎಂದರು. ಸಾರ್ವಜನಿಕರು ಇದರಲ್ಲಿ ಪಾಲ್ಗೋಳ್ಳುವಿಕೆಯಿಂದ ಅವರ ಸಹಾಯದಿಂದ ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ಪರಿಹಾರಕ್ಕೆ ಕ್ರಮಗಳನ್ನು ಕಂಡುಕೊಳ್ಳುವುದು. ಗ್ರಾಮಗಳಲ್ಲಿ ಜರುಗುವ ಗ್ರಾಮಸಭೆಗಳಲ್ಲಿ ಜನರ ಅವಶ್ಯಕತೆಗಳ ಕುರಿತು ಚರ್ಚೆ ಆಗಬೇಕು, ಇವುಗಳ ವಿಶ್ಲೇಷಣೆ ಮಾಡಿ ಜನರ ಬೇಡಿಕೆಗಳನ್ನು ಆಧ್ಯತೆಯ ಮೇಲೆ ಸಂಗ್ರಹ ಮಾಡಿ ಇವುಗಳಲ್ಲಿ ಅತಿ ಅವಶ್ಯಕವಾದ ಬೇಡಿಕೆಯನ್ನು ಪೂರೈಸಲು ಇರುವ ಅನುದಾನವನ್ನು ಹೇಗೆ ಬಳಸಬೇಕು ಹಾಗೂ ಸ್ಥಳೀಯವಾಗಿ ಸಂಪನ್ಮೂಲವನ್ನು ಹೇಗೆ ಕ್ರೋಡಿಕರಿಸಬೇಕೆಂಬುದನ್ನು ಚರ್ಚಿಸಬೇಕು ಎಂದರು.
ಗ್ರಾಮಗಳ ಅಭಿವೃದ್ದಿಗೆ ಗುಣಮಟ್ಟದ ಶಿಕ್ಷಣವು ಪ್ರಮುಖವಾಗಿದ್ದು ಗ್ರಾಮಗಳಲ್ಲಿರುವ ಶಾಲೆಗಳ ಶಿಕ್ಷಕರ ಕಲಿಕಾ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಅಂಗನವಾಡಿ, ಆರೋಗ್ಯ ಕೇಂದ್ರಗಳಲ್ಲಿಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಕುರಿತು ಗಮನ ಹರಿಸಬೇಕು ಎಂದರು. ಗ್ರಾಮಗಳ ಅಭಿವೃದ್ಧಿಗೆ ರೂಪಿತವಾಗುವ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವದು, ಆಯಾ ಕ್ಷೇತ್ರಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ನಿಯಮಿಸಿ ಅವುಗಳ ಗುಣಮಟ್ಟ ಹೆಚ್ಚಿಸಿ ಜೊತೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವದು ಅತೀ ಅವಶ್ಯಕವಾಗಿದೆ ಎಂದರು.
ದೆಹಲಿಯ ಸಮಾಜ ವಿಜ್ಞಾನ ಸಂಸ್ಥೆ ಅಧ್ಯಕ್ಷರಾದ ಜಾರ್ಜ ಮ್ಯಾಥಿವ್‌ ಮಾತನಾಡಿ ಗ್ರಾಮಗಳ ಅಭಿವೃದ್ಧಿ, ಜನರ ಜೀವನ ಮಟ್ಟ ಸುಧಾರಿಸಲು ಇರುವಂತಹ ಬೇಡಿಕೆಗಳು ಕೆಳಹಂತದಲ್ಲಿಯೇ ಅಂದರೆ ವಾರ್ಡ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚಿತವಾಗಬೇಕು ಎಂದರು. ಗ್ರಾಮ ಪಂಚಾಯತಗಳಿಗೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಅಗತ್ಯದ ತರಬೇತಿ ಹೊಂದುವದು ಅತೀ ಅವಶ್ಯಕವಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಯುವಜನತೆಯ ಸಹಕಾರವು ಅಗತ್ಯವಾಗಿದ್ದು ಗ್ರಾಮಗಳ ಅಭಿವೃದ್ಧಿಗಾಗಿ ಯುವ ಜನರು ಜಾಗೃತರಾಗುವದು ಬಹುಮುಖ್ಯವಾಗಿದೆ.
ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಗ್ರಾಮಗಳ ಅಭಿವೃದ್ಧಿ ಅತೀ ಪ್ರಮುಖವಾಗಿದ್ದು ಗ್ರಾಮಗಳ ಅಭಿವೃದ್ಧಿಗಾಗಿ ರೂಪಿಸುವ ಯೋಜನೆಗಳು 2025ರ ದೂರದೃಷಿಯಲ್ಲಿ ರೂಪಿಸಿ ಅವುಗಳನ್ನು ಅನುಷ್ಠಾನಕ್ಕೆ ತಂದು ಗದಗ ಜಿಲ್ಲೆಯನ್ನು ರಾಷ್ಟ್ರಕ್ಕೆ ಮಾದರಿ ಜಿಲ್ಲೆಯನ್ನಾಗಿಸಲು ಜಾರ್ಜ ಮ್ಯಾಥಿವ್‌ ಕರೆ ನೀಡಿದರು.
ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ರೂಪಾ ಅಂಗಡಿ, ಗದಗ ತಾ.ಪಂ. ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಜಿಲ್ಲೆಯ ಗ್ರಾ.ಪಂ. ತಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು, ಮಾಜಿ ಶಾಸಕ ಡಿ.ಆರ್‌.ಪಾಟೀಲ, ಡಾ. ಮೀನಾಕ್ಷಿ ಸುಂದರಂ, ಮಾಜಿ ಸಂಸದ ಹಾಗೂ ಕ.ಪಂ.ರಾ. ಪರಿಷತ್ತಿನ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಸ್ವಾಗತಿಸಿದರು.

loading...