ನರೇಗಾದಲ್ಲಿ ಅವ್ಯವಹಾರ ಆಗದಂತೆ ಎಚ್ಚರವಹಿಸಿ: ಬಿ.ಸಿ.ಪಾಟೀಲ

0
12
loading...

ಹಿರೇಕೆರೂರ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅತಿ ಮುಖ್ಯವಾದ ಯೋಜನೆಯಾಗಿದ್ದು, ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಸಬೇಕು. ಇದರಲ್ಲಿ ಅವ್ಯವಹಾರವಾಗದಂತೆ ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಂಜನಿಯರುಗಳ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸವಾದರೆ ಮಾತ್ರ ತಾಲೂಕು ಆಡಳಿತ ನೆಮ್ಮದಿಯಿಂದ ಇರಲು ಸಾಧ್ಯ. ಕಾರಣ ಎಲ್ಲ ಪಿಡಿಓ ಅವರು, ಜನರಿಗೆ, ಜನಪ್ರತಿನಿಧಿಗಳಿಗೆ ಅಭಿವೃದ್ಧಿ ನೆಪದಲ್ಲಿ ವಿನಾಕಾರಣ ತೊಂದರೆ ಉಂಟು ಮಾಡಬಾರದು. ಗ್ರಾ.ಪಂ ಸದಸ್ಯರನ್ನು ಕೆಲ ಪಿಡಿಓ ಅವರು ತಮ್ಮ ಮನೆಯ ಆಳಿನಂತೆ ನೋಡಿಕೊಳ್ಳುತ್ತಿದ್ದು, ಗ್ರಾಮ ಪಂಚಾಯಿತಿ ಕೇಂದ್ರ ಕಚೇರಿಯಲ್ಲಿ ಇದ್ದುಕೊಂಡು ಕಾರ್ಯನಿರ್ವಹಿಸಬೇಕು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಡವರಿಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿಸುವ ಯೋಜನೆಯಾಗಬೇಕೆ ಹೊರತು ಉದ್ಯೋಗಕ್ಕೆ ಕತ್ತರಿಯಾಗಬಾರದು. ಈ ಯೋಜನೆ ಅನುಷ್ಠಾನದಲ್ಲಿ ಎನಾದರೂ ಲೋಪದೋಷ ಕಂಡುಬಂದಲ್ಲಿ ಯಾವುದೆ ಕ್ರಮ ಜರುಗಿಸಲು ಯೋಚಿಸುವುದಿಲ್ಲ ಎಂದರು.
ಇದೆ ವೇಳೆ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ವತಿಯಿಂದ ಶಾಸಕ ಬಿ.ಸಿ.ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಪಂಚಾಯಿತಿ ಇಒ ಮನೋಹರ ದ್ಯಾಬೇರಿ, ಜಿ.ಪಂ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಕೆ.ವಿ.ಹಂಚಿನಮನಿ, ತಾ.ಪಂ ಅಧಿಕಾರಿಗಳಾದ ಸಂತೋಷ ತಳಕಲ್, ಗೋವಿಂದರಾಜ್, ಪ್ರದೀಪ ಹಾಗೂ ತಾಲೂಕಿನ ಎಲ್ಲ ಪಿಡಿಓ ಮತ್ತು ಇಂಜನಿಯರು ಇದ್ದರು.ಸಾಕ್ಷರತಾ ಸಂಯೋಜಕ ಜೆ.ಎಚ್.ಬಂಡೇರ ನಿರ್ವಹಿಸಿದರು.

loading...