ನಾಳೆ ಹೋರಾಟದ ರೂಪರೇಷೆಗಾಗಿ ರೈತರ ಸಭೆ

0
10
loading...

ಕನ್ನಡಮ್ಮ ಸುದ್ದಿ-ನರಗುಂದ: ಮಹದಾಯಿ ಜೋಡಣೆಗಾಗಿ ನಡೆಯುತ್ತಿರುವ ಉತ್ತರ ಕರ್ನಾಟಕ ರೈತರ ಈ ಹೋರಾಟ ಯೋಜನೆ ಅನುಷ್ಠಾನ ಆಗುವರೆಗೆ ನಿಲ್ಲದು. ಸರ್ಕಾರಗಳು ಇದನ್ನು ನೆನಪಿಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೋರಾಟದ ರೂಪರೇಷೆಗಳನ್ನು ಸಿದ್ದಗೊಳಿಸಲು ಜೂ. 10 ರಂದು ಬೆಳಿಗ್ಗೆ 11 ಗಂಟೆಗೆ ಉತ್ತರ ಕರ್ನಾಟಕದ 11 ತಾಲೂಕಿನ ರೈತರ ಸಭೆಯನ್ನು ಪಟ್ಟಣದ ಎ.ಪಿ. ಪಾಟೀಲ ಅವರ ಗೋದಾಮಿನಲ್ಲಿ ಕರೆಯಲಾಗಿದ್ದು ರೈತರು ಈ ಮಹತ್ವದ ಸಭೆಯಲ್ಲಿ ಭಾಗವಹಿಸಬೇಕೆಂದು ಮಹದಾಯಿ ಮಲಪ್ರಭೆ ಜೋಡನಾ ಹೋರಾಟ ಸಮಿತಿ ತಾಲೂಕ ಅಧ್ಯಕ್ಷ ಈರಬಸಪ್ಪ ಹೂಗಾರ ತಿಳಿಸಿದರು.

ಮಹದಾಯಿ ಮಲಪ್ರಭೆ ಜೋಡಣೆಗಾಗಿ ಆಗ್ರಹಿಸಿ ಪಟ್ಟಣದಲ್ಲಿ ನಡೆದ ರೈತರ ಧರಣಿ 1059 ನೇ ದಿನ ಸಭೆಯಲ್ಲಿ ಶುಕ್ರವಾರ ಅವರು ಮಾತನಾಡಿದರು.
ಈ ಹಿಂದೆ ರಾಷ್ಟ್ರಪತಿಗಳಿಗೆ ಮನವಿ ನೀಡಿ ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಲಾಗಿತ್ತು. ಇದು ಅಸಾಧ್ಯವಾದರೆ ನಮಗೆ ದಯಾಮರಣ ಕಲ್ಪಿಸಿ ಎಂದು ಕೇಳಿಕೊಳ್ಳಲಾಗಿತ್ತು. ರಾಷ್ಟ್ರಪತಿಗಳ ಆಡಳಿತ ಕಾರ್ಯಾಲಯದ ಕಾರ್ಯದರ್ಶಿಗಳು ಜೂನ್‍ವರೆಗೆ ಕಾಲವಕಾಶ ನೀಡಿ, ನಮಗೆ ಉತ್ತರ ತಿಳಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಉತ್ತರ ದೊರೆತಿಲ್ಲ ಹೀಗಾಗಿ ಹೋರಾಟದ ಮುಂದಿನ ರೂಪರೇಷೆಗಳನ್ನು ಸಿದ್ದಪಡಿಸಲು ರೈತರ ಸಭೆಯನ್ನು ಕರೆಯಲಾಗಿದೆ.

ಮಹದಾಯಿ ವಿವಾದ ನ್ಯಾಯಮಂಡಳಿಯಲಿದ್ದು ಕೊನೆಯ ವಿಚಾರಣೆ ಈಗಾಗಲೇ ನಡೆದುಹೋಗಿದೆ. ಆದರೆ ತೀರ್ಪು ಆಗಷ್ಟ ಒಳಗಾಗಿ ಬರಲಿದೆ. ಇದರ ಮಾಹಿತಿ ಅರಿತು ಈಗೀಗ ಹುಟ್ಟುಕೊಂಡ ಕೆಲ ಸಂಘಟಣೆಯವರು ಸಧ್ಯದಲ್ಲಿ ದೆಹಲಿಗೆ ತೆರಳಿ ಪ್ರಧಾನಿ ಮತ್ತು ಸಂಬಂಧಿಸಿದ ಸಚಿವರನ್ನು ಭೇಟಿಯಾಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆಂದು ತಿಳಿದು ಬಂದಿದೆ. ಇಷ್ಟು ವರ್ಷಗಳಿಂದ ಸುದೀರ್ಘವಾಗಿ ಹೋರಾಟ ನಡೆಸಿದ ಇಲ್ಲಿಯ ರೈತ ವರ್ಗ ಮಹದಾಯಿ ನೀರು ಮಲಪ್ರಭೆಗೆ ಜೋಡಣೆಯಾಗಬೇಕೆಂದು ಉಗ್ರ ಧೋರಣೆ ತಾಳಿದ್ದಾರೆ. ಹೀಗಾಗಿ ಈ ಹೋರಾಟ ನಿಲ್ಲದು. ರಾಷ್ಟ್ರಪತಿಗಳ ಕಾರ್ಯಾಲಯದಿಂದ ನಮಗೆ ಉತ್ತರ ದೊರೆಯಬೇಕಾಗಿದೆ.
ಇದು ವಿಳಂಬಗೊಂಡಲ್ಲಿ ಮಹದಾಯಿ ರೈತ ಹೋರಾಟ ಸಮಿತಿಯವರೂ ಕೂಡಾ ದೆಹಲಿಗೆ ತೆರಳಿ ರಾಷ್ಟ್ರಪತಿಗಳನ್ನು ಪುನಹ ಬೇಟಿ ಮಾಡುವುದು ಮತ್ತು ದೆಹಲಿಯ ಜಂತರ್‍ಮಂತರದಲ್ಲಿ ದೀರ್ಘ ಪ್ರತಿಭಟಣೆ ನಡೆಸುವ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿದ್ದಾರೆ. ಈ ಎಲ್ಲ ಸಮಗ್ರ ವಿಷಯ ಚರ್ಚಿಸಲು ಜೂ. 10 ರಂದು ಸಭೆ ನಡೆಸಿ ನಿರ್ಣಯಿಸಲಾಗುವುದೆಂದು ಅವರು ತಿಳಿಸಿದರು.

ಎಸ್.ಬಿ. ಜೋಗಣ್ಣವರ, ಪರಶುರಾಮ ಜಂಬಗಿ ಮಾತನಾಡಿದರು. ಧರಣಿಯಲ್ಲಿ ಈರಣ್ಣ ಸೊಪ್ಪಿನ, ಚಂದ್ರಗೌಡ ಪಾಟೀಲ, ರಾಘವೇಂದ್ರ ಗುಜಮಾಗಡಿ, ಚನ್ನು ನಂದಿ, ರಮೇಶ ನಾಯ್ಕರ್, ಅನಸವ್ವ ಶಿಂಧೆ, ಲಚ್ಚೆವ್ವ ಜ್ಯೋತೆಣ್ಣವರ, ನಾಗರತ್ನಾ ಸವಳಬಾವಿ, ಚನ್ನಮ್ಮ ಕರ್ಜಗಿ, ದೇವಕ್ಕ ತಾಳಿ, ಯಲ್ಲಮ್ಮ ಹಣಸಿ, ವೆಂಕಪ್ಪ ಹುಜರತ್ತಿ, ವಾಸು ಚವ್ಹಾಣ, ಸುಭಾಷ್ ಗಿರಿಯಣ್ಣವರ ಅನೇಕರು ಉಪಸ್ಥಿತರಿದ್ದರು.

loading...