ಪರಿಸರ ಕಾಳಜಿಗಾಗಿ ಯುವಶಕ್ತಿಯ ಸದ್ಭಳಕೆಯಾಗಬೇಕು: ಡಾ.ಲಕ್ಷ್ಮೀನಾರಾಯಣ

0
16
loading...

ಕನ್ನಡಮ್ಮ ಸುದ್ದಿ-ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ, ಬಿಸಲಕೊಪ್ಪ ಗ್ರಾಮ ಪಂಚಾಯತ ಹಾಗೂ ಸೂರ್ಯನಾರಾಯಣ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ `ವಿಶ್ವ ಪರಿಸರ ದಿನ’ ಕಾರ್ಯಕ್ರಮ ಸಸಿ ನೆಡುವುದರ ಮೂಲಕ ಸಂಭ್ರಮದಿಂದ ನೆರವೇರಿತು.
ಸಭಾ ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ತಸ್ಥ ಡಾ.ಲಕ್ಷ್ಮೀನಾರಾಯಣ ಹೆಗಡೆ ಮಾತನಾಡಿ, ಪರಿಸರ ಕಾಳಜಿಗಾಗಿ ಯುವಶಕ್ತಿಯ ಸದ್ಭಳಕೆಯಾಗಬೇಕು. ಪ್ಲಾಸ್ಟಿಕ್ ರಹಿತ ವ್ಯವಸ್ಥೆಗೆ ಮಕ್ಕಳು ಜಾಗೃತವಾಗಬೇಕು ಎಂದು ತಿಳಿ ಹೇಳಿದರು. ವಿದ್ಯಾರ್ಥಿಗಳು ಕೇವಲ ನೌಕರಿಗಾಗಿ ಆತುರ ಪಡದೇ ಕೃಷಿಯಲ್ಲಿಯೂ ಸಹ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಅರಣ್ಯ ಇಲಾಖೆಯಿಂದ ಆಗಮಿಸಿದ್ದ ಉಪವಲಯ ಅರಣ್ಯಾಧಿಕಾರಿ ಯಶೋಧಾ ನಾಯ್ಕ ಪ್ರತಿದಿನ ಪರಿಸರ ದಿನವಾಗಬೇಕು ಎಂದು ಹೇಳಿದರು.

ಬಿಸಲಕೊಪ್ಪ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಭಟ್ಟ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರ್ಥೈಸಿದರು. ಕೆ.ಡಿ.ಪಿ. ನಾಮ ನಿರ್ದೇಶಿತ ಸದಸ್ಯ ಬಿ.ಎಸ್.ಗಂಗಾಧರ, ಅರಣ್ಯ ಸಂರಕ್ಷಣೆ ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ ಜನರ ಕಾರ್ಯಕ್ರಮವಾಗಲೆಂದು ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಿ.ವಿ.ಹೆಗಡೆ, ಗ್ರಾಮ ಪಂಚಾಯ್ತಿ ಸದಸ್ಯರು, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವೃಕ್ಷಲಕ್ಷದ ಗಣಪತಿ ಬಿಸಲಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ `ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ’,`ಸಸ್ಯ ಶಾಮಲಾಂ ವಂದೇ ಮಾತರಂ’ ಎನ್ನುವ ಘೋಷಣೆಯನ್ನು ಹಾಕುತ್ತಾ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಕುರಿತು ಆಕರ್ಷಕವಾಗಿ ಜಾಗೃತಿ ಜಾತಾ ನಡೆಸಿದರು.

loading...