ಪಿಚ್ಚಿಂಗ್ ಕುಸಿದು ಕೆರೆ ಪಾಲಾದ ಮಣ್ಣು

0
25
loading...

ಶಿರಸಿ: ನಗರದ ಹೃದಯ ಭಾಗದಲ್ಲಿರುವ ದೇವಿಕೆರೆಗೆ ಕಟ್ಟಿದ್ದ ಪಿಚ್ಚಿಂಗ್ ಕುಸಿದು ಮಣ್ಣು ಕೆರೆ ಪಾಲಾಗಿದ್ದು, ಲ್ಯಾಂಡ್ ಆರ್ಮಿಯ ಕಾಮಗಾರಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೆರೆಯ ದಂಡೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಪಿಚ್ಚಿಂಗ್ ಕುಸಿದು ಮಣ್ಣೆಲ್ಲಾ ಕೆರೆ ನೀರು ಸೇರಿದ್ದು, ಕೆರೆ ದಂಡೆ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡ ಲ್ಯಾಂಡ್ ಆರ್ಮಿ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಸುರಿಯುವ ಮಳೆಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಮಾಡಿದ ಕೆಲಸವು ವ್ಯರ್ಥವಾಗುತ್ತಿದೆ. ಈಗಾಗಲೇ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಧಾನ ಕೇಳಿ ಬರುತ್ತಿರುವ ನಡುವೆ ಪಿಚ್ಚಿಂಗ್ ಕುಸಿದಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಮಲಗಿದ್ದ ಲ್ಯಾಂಡ್ ಆರ್ಮಿ
ದೇವಿಕೆರೆಯ ಹೂಳು ತೆಗೆದು ವರ್ಷ ಕಳೆದರೂ ಲ್ಯಾಂಡ್ ಆರ್ಮಿ ನಿರ್ಲಕ್ಷದಿಂದ ಕೆರೆಯ ಅಭಿವೃದ್ಧಿ ಕಾಮಗಾರಿ ನಿಂತ ನೀರಾಗಿದೆ. ಕಾಮಗಾರಿ ಮಾಡಲು ಸಾಕಷ್ಟು ಸಮಯಾವಕಾಶವಿದ್ದರೂ ಸಹ ಮಳೆಗಾಲ ಸಮೀಪಿಸುತ್ತಿದ್ದಂತೆ ಕೆಲಸ ಆರಂಭಿಸಿರುವುದೇ ಇಷ್ಟಲ್ಲಾ ಆವಾಂತರಕ್ಕೆ ಕಾರಣವಾಗಿದೆ. ಇವರ ಬೇಜವಬ್ದಾರಿತನದಿಂದ ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿ ನೀರು ಪಾಲಾಗಿದೆ. ಸರ್ಕಾರದ ಹಣವನ್ನು ಬೇಕಾ ಬಿಟ್ಟಿ ವ್ಯರ್ಥ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವವರಾರು ಎಂದು ನಗರವಾಸಿಗಳು ಪ್ರಶ್ನಿಸುತ್ತಿದ್ದಾರೆ.

loading...