ಪುರಸಭೆ ಚುನಾವಣೆ: ಆಕಾಂಕ್ಷೆ ಆರಂಭ ಹೊಸ-ಹಳೆ ಮುಖಗಳ ಸಮ್ಮಿಲನ

0
55
loading...

ನಾಗರಾಜ ಪ. ಶಹಾಪುರಕರ
ಹಳಿಯಾಳ: ಪುರಸಭೆಗೆ ಚುನಾವಣೆ ನಡೆಯಲು ಇನ್ನು ಕೆಲ ತಿಂಗಳು ಕಾಲಾವಕಾಶ ಉಳಿದಿದ್ದು ಪುನರ್‌ವಿಂಗಡನೆಯಾದ ವಾರ್ಡ್‌ಗಳಲ್ಲಿ ಮೀಸಲಾತಿ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸ ಬಯಸುವವರ ಆಕಾಂಕ್ಷೆಗಳು ಆರಂಭಗೊಂಡಿವೆ.
ಪಟ್ಟಣ ಪಂಚಾಯತಿಯಿಂದ ಮೇಲ್ದರ್ಜೆಗೇರಿದ ಪುರಸಭೆಯಲ್ಲಿ ಸಧ್ಯ 20 ಸದಸ್ಯ ಬಲದಲ್ಲಿ 15 ಸದಸ್ಯರಿರುವ ಕಾಂಗ್ರೆಸ್‌ ಪಕ್ಷವು ಆಡಳಿತ ನಡೆಸುತ್ತಿದೆ. ನಾಲ್ವರು ಜೆಡಿಎಸ್‌ ಹಾಗೂ ಒಬ್ಬರು ಪಕ್ಷೇತರ (ಭಾಜಪಕ್ಕೆ ಸೇರ್ಪಡೆಗೊಂಡಿದ್ದಾರೆ) ಸದಸ್ಯರಾಗಿದ್ದಾರೆ. ಬರುವ ಚುನಾವಣೆಯಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿ ಒಟ್ಟು 23 ಸದಸ್ಯರು ಆಯ್ಕೆಯಾಗಲಿದ್ದಾರೆ.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳ ಪಟ್ಟಣದಲ್ಲಿ ಕಾಂಗ್ರೆಸ್‌ ಪಕ್ಷವು ಹೆಚ್ಚಿನ ಮತಗಳನ್ನು ಪಡೆದಿದ್ದು ಕಾಂಗ್ರೆಸ್‌ ಪುರಸಭೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಉಮೇದಿಯಲ್ಲಿದೆ. ಇನ್ನೊಂದೆಡೆ ಉತ್ತಮ ಸ್ಪರ್ಧೆ ನೀಡಿರುವ ಭಾಜಪವು ಪುರಸಭೆಯಲ್ಲಿ ಬದಲಾವಣೆ ಮಾಡಿ ತಾನು ಅಧಿಕಾರಕ್ಕೆ ಬರುವ ತಂತ್ರ ಹೆಣೆಯುತ್ತಿದೆ. ಜೆಡಿಎಸ್‌ ಪಕ್ಷವೂ ಸಹ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸುವ ಚಿಂತನೆ ಮಾಡುತ್ತಿದೆ.
ವಾರ್ಡ್‌ಗಳ ಪರಿಷ್ಕರಣೆ ಹಾಗೂ ಮೀಸಲಾತಿ ಬದಲಾವಣೆ ಕಾರಣ ಹಾಲಿ ಸದಸ್ಯರಾಗಿರುವ ಘಟಾನುಘಟಿಗಳು ತಮ್ಮ ವಾರ್ಡ್‌ಗಳಲ್ಲಿ ಮತ್ತೊಮ್ಮೆ ಸ್ಪರ್ಧಾ ಕಣಕ್ಕಿಳಿಯುವ ಅವಕಾಶ ಕಳೆದುಕೊಂಡಿದ್ದಾರೆ. ಹೀಗಾಗಿ ಕೆಲ ಹಳೆಯ ಮುಖಗಳನ್ನು ಹೊರತುಪಡಿಸಿ ಹೊಸ ಮುಖಗಳು ಕಾಣಸಿಗಲಿವೆ.
ಪಟ್ಟಣ ಪಂಚಾಯತದಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿ ಉಪಾಧ್ಯಕ್ಷ ಸ್ಥಾನವನ್ನು ಸಹ ಹೊಂದಿದ್ದ ಸಂತಾನ್‌ ಸಾವಂತ ರವರು ಭಾಜಪದ ಸಕ್ರೀಯ ಕಾರ್ಯಕರ್ತರಾಗಿದ್ದು ವಾರ್ಡ್‌ ನಂ. 15 ರಲ್ಲಿ ಭಾಜಪ ಅಭ್ಯರ್ಥಿಯಾಗಿ ಸ್ಪರ್ಧಿಸುವ ಖಚಿತ ಸಾಧ್ಯತೆಗಳಿವೆ. ಮಾಜಿ ಶಾಸಕ ಸುನೀಲ ಹೆಗಡೆ ಅವರ ನಿವಾಸವಾದ ಸುಭಾಸ ರಸ್ತೆಯೊಂದಿಗೆ ಪಕ್ಕದ ಸೈಂಟ್‌ ಝೇವಿಯರ್‌ ರಸ್ತೆ, ರಾಮದೇವಗಲ್ಲಿ, ಭಾಗಶಃ ಚರ್ಚ್‌ ರಸ್ತೆ ಇದು ಮೀಸಲುರಹಿತ (ಸಾಮಾನ್ಯ) ವಾರ್ಡ್‌ ಆಗಿದ್ದು ಸಂತಾನ್‌ ಸಾವಂತ ಭಾಜಪದ ಹುರಿಯಾಳಾಗಿ ಅಖಾಡಕ್ಕೆ ಇಳಿಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ವಾರ್ಡ್‌ ನಂ. 21 ರಲ್ಲಿ ದುರ್ಗಾನಗರದ ನಿವಾಸಿಯಾಗಿರುವ ದುರ್ಗಾದೇವಿ ದೇವಸ್ಥಾನದ ಅರ್ಚಕ ಮೋಹನ ವಝೆ ಅವರ ಸೊಸೆಯಾದ ಪತ್ರಕರ್ತ ಪ್ರಸಾದ ವಝೆ ಅವರ ಪತ್ನಿ ಸುಸ್ಮಿತಾ ಇವರನ್ನು ಕಣಕ್ಕಿಳಿಸುವ ಚಿಂತನೆ ನಡೆಯುತ್ತಿದೆ. ದುರ್ಗಾನಗರ, ಗುಡ್ನಾಪುರಗಲ್ಲಿ, ಹೊಸ ಚರ್ಚ್‌ ರಸ್ತೆ ಕ್ರಾಸ್‌ನಿಂದ ಅನ್ನಪೂರ್ಣ ಹೊಟೇಲ್‌ವರೆಗೆ, ಪ್ರದರ್ಶನ ರಸ್ತೆ, ಕಾಕರಗಲ್ಲಿ, ದೇಮಣ್ಣಾಗೌಡಾ ಲೇಔಟ್‌, ಪೊಲೀಸ್‌ ಕ್ವಾರ್ಟ್‌ರ್ಸ್‌ ಈ ಭಾಗಗಳನ್ನೊಳಗೊಂಡ ವಾರ್ಡ್‌ನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡಿರುವ ಸುಸ್ಮಿತಾ ಪ್ರಸಾದ ವಝೆ ಸ್ಪರ್ಧಾ ಕಣಕ್ಕಿಳಿಯಲಿದ್ದು ಇವರನ್ನು ಭಾಜಪ ಇಲ್ಲವೇ ಕಾಂಗ್ರೆಸ್‌ ಯಾವ ಪಕ್ಷ ತನ್ನ ಅಭ್ಯರ್ಥಿಯನ್ನಾಗಿಸಲಿದೆ ಎಂಬುದು ಕಾದು ನೋಡಬೇಕಾಗಿದೆ.
ಪುರಸಭೆಯ ಹಾಲಿ ಸದಸ್ಯ ಸುಬಾನಿ ಹುಬ್ಬಳ್ಳಿ ಪ್ರತಿನಿಧಿಸುತ್ತಿರುವ ವಾರ್ಡ್‌ ವಿಂಗಡನೆಯಾಗಿದೆ. ಪರಿಣಾಮ ಪಕ್ಕದ ಜಂಬ್ಯಾಳಗಲ್ಲಿಯಲ್ಲಿ ನಿವಾಸ ಹೊಂದಿರುವ ಸುಬಾನಿ ಹುಬ್ಬಳ್ಳಿ ವಾರ್ಡ್‌ ನಂ. 10 ಕಸಬಾಗಲ್ಲಿಯಲ್ಲಿ ಸ್ಪರ್ಧಿಸುವ ಅವಕಾಶಗಳಿವೆ. ಇವರು ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಬಹುದಾಗಿದೆ.
ಗುತ್ತಿಗೆದಾರ ಬಾಬು ಕಾಮ್ರೇಕರ ಅವರ ಪತ್ನಿಯಾಗಿರುವ ಜೀಜಾಮಾತಾ ಸಂಘದ ನಿರ್ದೇಶಕಿ ತನುಜಾ ಕಾಮ್ರೇಕರ ಇವರನ್ನು ವಾರ್ಡ್‌ ನಂ. 5 ರಲ್ಲಿ ಅಭ್ಯರ್ಥಿಯಾಗಿಸುವ ಸಾಧ್ಯತೆಗಳಿವೆ. ಬೆಳಗಾಂವ ರಸ್ತೆ (ಪೂರ್ವಭಾಗ), ಗಣೇಶ ನಗರ, ಸಣ್ಣ ನೀರಾವರಿ ಇಲಾಖೆಯ ವಸತಿಗೃಹಗಳು, ಸದಾಶಿವನಗರ, ಶ್ರೀರಾಮನಗರ, ಬಸವನಗರ, ನಾಗಝರಿ ಪ್ರದೇಶ, ಕೋರ್ಟ್‌ ರಸ್ತೆ ಹಾಗೂ ಗಣೇಶ ಕಲ್ಯಾಣ ಮಂಟಪ ಪ್ರದೇಶವನ್ನೊಳಗೊಂಡ ಈ ವಾರ್ಡ್‌ದಲ್ಲಿ ತನುಜಾ ಕಾಮ್ರೇಕರ ಇವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಬಹುದಾಗಿದೆ.

loading...