ಪ್ರತಿಯೊಬ್ಬರಿಗೂ ಸೈಬರ್‌ ಅಪರಾಧಗಳ ಬಗ್ಗೆ ಅರಿವು ಅನಿವಾರ್ಯ: ನ್ಯಾ. ಮೋಹನ್‌ಕುಮಾರಿ

0
8
loading...

ಕನ್ನಡಮ್ಮ ಸುದ್ದಿ-ಕುಮಟಾ: ಇಂದಿನ ತಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಸೈಬರ್‌ ಅಪರಾಧಗಳ ಬಗ್ಗೆ ಅರಿವು ಇರುವುದು ಅನಿವಾರ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಕಾನೂನು ಸಾಕ್ಷರತಾ ಕಾರ್ಯಕ್ರಮದ ಉದ್ದೇಶ ಎಂದು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಹಾಗೂ ಪ್ರ ದ ನ್ಯಾ ದಂಡಾಧಿಕಾರಿ ಮೋಹನ್‌ಕುಮಾರಿ ಎನ್‌ ಬಿ ಹೇಳಿದರು.
ಅವರು ಬುಧವಾರ ಇಲ್ಲಿನ ಡಾ ಎ ವಿ ಬಾಳಿಗಾ ವಾಣಿಜ್ಯ ಪದವಿ ಕಾಲೇಜಿನಲ್ಲಿ ಕುಮಟಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ತಾಲೂಕಾ ಪಂಚಾಯತ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪುರಸಭೆ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ, ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಸ್ತ್ರೀ ಶಕ್ತಿ ಸಂಘ ಹಾಗೂ ಎಲ್ಲಾ ಗ್ರಾಮ ಪಂಚಾಯತಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಸ್ಮಾರ್ಟ್‌ ಪೋನ್‌ಗಳು ಮತ್ತು ಕಂಪ್ಯೂಟರ್‌ಗಳು ದಿನಬಳಕೆಯ ವಸ್ತುಗಳಾಗಿವೆ. ಪ್ರತಿಯೊಂದು ವ್ಯವಹಾರಕ್ಕೂ ಇಂಟರ್‌ನೆಟ್‌ ಬಳಸುತ್ತೇವೆ. ಸಾಮಾಜಿಕ ಜಾಲತಾಣ ಬಳಸುವುದು ನಮ್ಮ ಹವ್ಯಾಸವಾಗಿದೆ. ಆದರೆ ಇವುಗಳ ಬಳಕೆಯಲ್ಲಿ ಯಾವುದೇ ನಿರ್ಲಕ್ಷವಾದಲ್ಲಿ ನಮಗೆ ಯಾವುದೇ ತರಹದ ಹಾನಿ ಉಂಟಾಗಬಹುದು, ಕಾನೂನಿನ ಕಟ್ಟಲೆಯಲ್ಲಿ ನಿಲ್ಲಿಸಬಹುದು. ಹಾಗಾಗಿ ಈ ಬಗ್ಗೆ ಸಂಪೂರ್ಣ ಅರಿವು ಹೊಂದಬೇಕಾಗಿದೆ ಎಂದರು.
ತರಭೇತಿಯಲ್ಲಿರುವ ಪಿಎಸ್‌ಐ. ಚಿತ್ರೇಶ್‌ ಹಾಗೂ ಪಿಎಸ್‌ಐ ಹರ್ಷ ಪಿ ಅವರು ಮಾತನಾಡಿ, ಸೈಬರ್‌ ಕ್ರೈಂ ಗಳು ಯಾವ ಯಾವ ರೀತಿಯದ್ದಾಗಿರುತ್ತದೆ ಮತ್ತು ಸೈಬರ್‌ ಕ್ರೈಂ ಗಳಿಂದ ಯಾವ ರೀತಿ ಮುನ್ನೇಚ್ಚರಿಕೆ ವಹಿಸಬೇಕು ಎಂದು ಮಾಹಿತಿ ನೀಡಿದರು.
ಸಹಾಯಕ ಸರಕಾರಿ ಅಭಿಯೋಜಕ ಮಂಜುನಾಥ ಎಚ್‌ ನಾಯ್ಕ ಮಾತನಾಡಿ, ಅಂತರ್ಜಾಲಗಳನ್ನು ಕೇವಲ ಮಾಹಿತಿಗಾಗಿ ಮಾತ್ರ ಬಳಸಿ, ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಅದರಲ್ಲೂ ಹೆಣ್ಣುಮಕ್ಕಳು ಅತಿ ಎಚ್ಚರಿಕೆಯಿಂದ ಇರಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್‌ ಎ ಹೆಗಡೆ, ಪ್ರಾಂಶುಪಾಲ ಜಯರಾಮ್‌ ಭಟ್‌ ಹಾಗೂ ಇತರರು ಉಪಸ್ಥಿತರಿದ್ದರು. ಕುಮಟಾ ಪಿ ಎಸ್‌ ಐ ಸಂಪತ್ತು ಸ್ವಾಗತಿಸಿದರು. ಎನ್‌ ಜಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ ಅರವಿಂದ ನಾಯ್ಕ ನಿರೂಪಿಸಿದರು, ಪ್ರೊ ವಿ ಡಿ ಭಟ್‌ ವಂದಿಸಿದರು.

loading...