ಬಳಕೆಯಾಗದ ಹಣದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

0
11
loading...

ಗದಗ : ಜಿಲ್ಲಾ ಪಂಚಾಯತಿಗೆ ಸೇರಿದ ಎಲ್ಲ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಕಳೆದ ಹಣಕಾಸು ವರ್ಷದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇದ್ದ ಹಣ ಉಪಯೋಗವಾಗದೇ ಮಾರ್ಚ ಅಂತ್ಯಕ್ಕೆ ಮರಳಿ ಸರ್ಕಾರಕ್ಕೆ ಹೋದ ಕುರಿತ ವರದಿಯನ್ನು ತಕ್ಷಣವೇ ಸಲ್ಲಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಸೂಚಿಸಿದರು.
ಗದಗ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ಅಧ್ಯಕ್ಷತೆಯ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿಂದು ಮಾತನಾಡಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ತ್ರೈಮಾಸಿಕಕ್ಕೆ ಬರುವ ಅನುದಾನ ಕುರಿತು ಎಲ್ಲ ಇಲಾಖೆಗಳು ಕಡ್ಡಾಯವಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ತಮ್ಮ ಗಮನಕ್ಕೆ ತಂದು ಅಗತ್ಯದ ಅನುಮೋದನೆ ಪಡೆದು £ಗದಿತ ಅವಧಿಯಲ್ಲಿ ವೆಚ್ಚ ಮಾಡಬೇಕು.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಭೆಯು ಮಹತ್ವದ್ದಾಗಿದ್ದು ಇದಕ್ಕೆ ಆಗಮಿಸುವ ಮುನ್ನ ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಯ ಪ್ರತಿಯೊಂದು ಯೋಜನೆ ಅವುಗಳ ಜಾರಿ ಕುರಿತಾದ ಪ್ರತಿಯೊಂದು ಮಾಹಿತಿಯನ್ನು ಹೊಂದಿರಬೇಕು. ಸಭೆಯಲ್ಲಿ ಮಾಹಿತಿಯನ್ನು ನಂತರ ಸಲ್ಲಿಸಲಾಗುವುದು ಎನ್ನುವ ಧೋರಣೆ ಸರಿಯಲ್ಲ ಎಂದು ಮಂಜುನಾಥ ಚವ್ಹಾಣ ನುಡಿದರು.
ಕಳೆದ ಹಣಕಾಸು ವರ್ಷದಲ್ಲಿ ಕೃಷಿ ಇಲಾಖೆಯ ಯೋಜನಾವಾರು ಮಾಹಿತಿ ನೀಡಲು ತಿಳಿಸಲಾಗಿದ್ದರೂ ಈವರೆಗೆ ಮಾಹಿತಿ ನೀಡಿರುವುದಿಲ್ಲ. ಆರೋಗ್ಯ ಇಲಾಖೆಯಲ್ಲಿ 1.60 ಕೋಟಿ ರೂ. ಮೊತ್ತದ ಅನುದಾನವನ್ನು ವೆಚ್ಚ ಮಾಡಿರುವ ಕುರಿತು ಜಿ.ಪಂ. ಅಧ್ಯಕ್ಷರು, ಸ್ಥಾಯಿ ಸಮಿತಿ ಅಲ್ಲದೇ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗಿಲ್ಲ. ಈ ಕುರಿತಂತೆ ತಾವು ವಿಚಾರಣಾ ಸಮಿತಿಯನ್ನು ರಚಿಸುತ್ತಿದ್ದು ಈ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕ್ರಮ ವಹಿಸಲು ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ನಿರ್ದೇಶನ ನೀಡಿದರು.
ಕಳೆದ ಹಣಕಾಸು ವರ್ಷದಲ್ಲಿ ನಡೆದ ಜಿ.ಪಂ. ಕೆಡಿಪಿ ಮತ್ತು ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾದ ವಿಷಯಗಳ ಕುರಿತು ಬಾಕಿ ಉಳಿದಿರುವ ವರದಿ ಹಾಗೂ ಮಾಹಿತಿಯನ್ನು ಹಾಗೂ ಪ್ರಸಕ್ತ ಹಣಕಾಸು ವರ್ಷದ ಎಪ್ರಿಲ್ ದಿಂದ ಮೇ ವರೆಗಿನ ಇಲಾಖೆಗಳ ಕಾರ್ಯನಿರ್ವಹಣೆ ವರದಿಯನ್ನು ಸಮಗ್ರವಾಗಿ ತಯಾರಿಸಿ ತಮಗೆ ಸಲ್ಲಿಸಬೇಕು ಎಂದು ಸಿ.ಇ.ಓ ನಿರ್ದೇಶನ ನೀಡಿದರಲ್ಲದೇ ಈ ಕುರಿತಂತೆ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ಅವರ ಸೂಚನೆಯಂತೆ ಸಭೆಯನ್ನು ಸೋಮವಾರ ದಿ: 18 ಕ್ಕೆ ಮುಂದೂಡಿದರು. ದಿನಾಂಕ 18 ರ ಸಭೆಯಲ್ಲಿ ಯಾವುದೇ ಇಲಾಖೆ ಜಿಲ್ಲಾ ಮುಖ್ಯಸ್ಥರು ಈಗ ನಿರ್ದೇಶಿಸಿರುವಂತೆ ಪ್ರತಿಯೊಂದು ಮಾಹಿತಿಯೊಂದಿಗೆ ಹಾಗೂ ಕಾರ್ಯನಿರ್ವಹಣಾ ವಿವರಗಳೊಂದಿಗೆ ಹಾಜರಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ರೂಪಾ ಅಂಗಡಿ, ಉಪಕಾರ್ಯದರ್ಶಿ ಎಸ್.ಸಿ. ಮಹೇಶ, ಜಿ.ಪಂ. ಯೋಜನಾಧಿಕಾರಿ ಬಿ.ಆರ್. ಪಾಟೀಲ, ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

loading...