ಬಸವನಾಡಿನಲ್ಲಿ ಬಸವಣ್ಣನ ಹಬ್ಬ: ಭಾರತೀಯ ಸಂಪ್ರದಾಯದ ಮೊದಲ ಹಬ್ಬ ಕಾರಹುಣ್ಣಿಮೆ

0
10
loading...

ಶಂಕರ ಕಾಗಿ
ಮಹಾಲಿಂಗಪೂರ: ಭಾರತ ದೇಶದ ಮಣ್ಣಿನ ಮಕ್ಕಳು ಕಾರಹುಣ್ಣಿಮೆಯಲ್ಲಿ ಸಂಭ್ರಮ-ಸಡಗರದಿಂದ ಹಬ್ಬದಂತೆ ಆಚರಿಸಲಾಗುತ್ತದೆ. ದೇಶದುದ್ದ÷ಕ್ಕೂ ಈ ಹಬ್ಬವು ವಿಭಿನ್ನವಾಗಿ ಆಚರಿಸಲ್ಪಡುತ್ತದೆ. ಯಾವುದೇ ಧರ್ಮದ ಹಬ್ಬಗಳಲ್ಲಿ ಮನುಷ್ಯರು ಉಡುಗೆ-ತೊಡುಗೆಗಳನ್ನು ಖರಿದಿಸಿ ತಮ್ಮನ್ನು ತಾವು ಸಿಂಗರಿಸಿಕೊಳ್ಳುವುದು ವಿಶೇಷವೇನಲ್ಲ. ಆದರೇ ಮಣ್ಣಿನ ಮಗ ರೈತ ತಾನು ಶೃಂಗಾರಗೊಳ್ಳದೇ ತನ್ನ ಜೀವನದ ಭಾಗವಾಗಿರುವ ಎತ್ತುಗಳಿಗೆ ಬಣ್ಣ ಹಚ್ಚಿ, ಬಣ್ಣಬಣ್ಣದ ಹಗ್ಗಗಳನ್ನು ಕಟ್ಟಿ, ಆಕಳ ಕೊಡಿಗೆ ಕಲರ್‌ ಪುಲ್‌ ಜೊಡಣೆಗಳನ್ನು ಹಾಕುವುದರ ಮೂಲಕ ಮದುವನಗಿತ್ತಿಯಂತೆ ಸಿಂಗರಿಸಲಾಗುವುದು. ಕಾರ ಹುಣ್ಣಿಮೆ ದಿನದಂದು ತೋಟದ ಅಂಗಳದಲ್ಲಿರುವ ಎತ್ತುಗಳನ್ನು ಸ್ವಚ್ಛವಾಗಿ ತೊಳೆದು, ಮೈಗೆ ವಿಧವಿಧ ಬಣ್ಣ ಬಳಿದು, ಸಿಂಗರಿಸಿದ ನಂತರ ಮನೆಯವರೆಲ್ಲರೂ ಕೂಡಿ ಪೂಜೆಮಾಡಿ, ಕೊಡಿಗೆ ಕೊಡಬಳಿಗೆ(ಎಣ್ಣೆಯಿಂದ ಕರಿದ ಕಡಬು) ತೊಡಿಸಿ, ಮಣ್ಣಿನ ಮಗನನ್ನು ಹರಸವ್ವ ಕಾಮದೇನು ಎಂದು ವಂದಿಸುತ್ತಾರೆ.
ಕರಿ ಹರಿಯುವ ಸಂಪ್ರದಾಯ- ಎತ್ತುಗಳ ಸಿಂಗಾರದೊಂದಿಗೆ ಪೂಜೆಗೈದು ತರತರದ ಆಹಾರಗಳನ್ನು ತಿನ್ನಿಸುವದು ಅಷ್ಟೆ ಅಲ್ಲದೇ, ಗ್ರಾಮೀಣ ಜನರ ಸಾಂಪ್ರದಾಯಿಕ ಆಟಗಳಲ್ಲಿ ಬಹುದೊಡ್ಡ ಮನರಂಜನೆ ಎಂದರೇ ಎತ್ತುಗಳನ್ನು ಕರಿ ಹರಿಯುವ ಸಂಪ್ರದಾಯ. ಗ್ರಾಮದ ಗೌಡರ ಮನೆಗಳ ಎತ್ತುಗಳು ಸೇರಿದಂತೆ ಊರ ಪ್ರಮುಖರು ಎತ್ತುಗಳ ಸ್ಪರ್ಧೇ ಮಾಡಲಾಗುವುದು. ಇದರಲ್ಲಿ ಪ್ರಥಮ ಬಂದ ಎತ್ತುಗಳಿಗೆ ಬಹುಮಾನ ಮತ್ತು ಸನ್ಮಾನ ಕೂಡ ನಡೆಯುತ್ತದೆ. ಈ ಕರಿ ಹರಿಯುವ ಸಂಪ್ರದಾಯದಲ್ಲಿ ಇನ್ನೊಂದು ವಿಶಿಷ್ಟವೆಂದರೇ ಎತ್ತುಗಳ ಓಟದ ಸ್ಪರ್ದೇಯಲ್ಲಿ ಭಾಗಿಯಾದ ಎತ್ತು ತಮ್ಮ ಹದ್ದವನ್ನು(ಮಿತಿ) ಬೇರೆಡೆಗೆ ಹೊದರೇ ಆ ಭಾಗದ ಗ್ರಾಮದವರು ಆ ಎತ್ತುಗಳನ್ನು ಬರಮಾಡಿಕೊಂಡು ಸಂಭ್ರಮಾಚರಣೆ ಮಾಡುತ್ತಾರೆ. ಮತ್ತೊಂದು ಕರಿ ಸಂಪ್ರದಾಯದ ಎತ್ತು ಆ ಊರಿಗೆ ಬರುವವರೆಗೆ ಅಲ್ಲಿ ಕರಿ ಹರಿಯುವಂತಿಲ್ಲ ಎಂಬ ನಂಬಿಕೆ ಇಂದು ಕೂಡ ಜೀವಂತವಾಗಿದೆ.
ರೈತರಿಗೆ ರಜೆ, ಸಂಭ್ರಮಕ್ಕೆ ಕರೆ- ಕಾರಹುಣ್ಣಿಮೆಯು ಭಾರತೀಯ ಸಂಪ್ರದಾಯದ ವರ್ಷದ ಮೊದಲನೆ ಹಬ್ಬ. ಒಂದೆಡೆ ಮುಂಗಾರಿ ಮಳೆ ಪ್ರಾರಂಭವಾಗಿದ್ದು. ಬಿತ್ತನಗಳನ್ನು ಪ್ರಾರಂಭಿಸುವ ಕಾಲ. ಬೇಸಿಗೆಯ ಬರದಿಂದ ಬಾಡಿದ ಎತ್ತುಗಳಿಗೆ ಈ ಹಬ್ಬದ ಮೂಲಕ ಚೇತನ ನೀಡಿ, ಅವುಗಳಿಂದ ವರ್ಷಪೂರ್ತಿ ಮಣ್ಣಿನಲ್ಲಿ ಕಾಯಕ ಸೇವೆ ತೊಡಗಿಸಲು ಮಾಡಿದ ಸಂಪ್ರದಾಯ ಎನ್ನಬಹುದು. ಅಂತೆಯೇ ರೈತರೆಲ್ಲರೂ ಈ ದಿನ ಸಂಪೂರ್ಣವಾಗಿ ತಮ್ಮ ಕೆಲಸಕಾರ್ಯಗಳಿಗೆ ರಜೆ ಮಾಡಿ, ಎತ್ತುಗಳನ್ನು ಪೂಜೆಗೈಯುತ್ತಾರೆ. ಎತ್ತುಗಳನ್ನು ಓಡಿಸಲು ಬಾರಕೋಲ ಉಪಯೋಗ ಸಾಮಾನ್ಯವಾಗಿದ್ದರು ಕೂಡ ಹಬ್ಬದ ದಿನದಂದು ಬಾರಕೋಲ ಉಪಯೋಗಿಸದೆ ಇರುವುದು ವಿಶೇಷ. ಹೀಗಾಗಿ ವರ್ಷದ ಮೊದಲನೆ ಹಬ್ಬವು ರೈತರ ಮನೆಗಳಲ್ಲಿ ಕಳೆಕಟ್ಟಿ ಸಂಭ್ರಮಿಸುತ್ತದೆ.
ನಗರದಲ್ಲಿಯೂ ಆಚರಣೆ- ರೈತರ ಹಬ್ಬವೆಂದೆ ಪ್ರಸಿದ್ದಿಯಾದ ಕಾರಹುಣ್ಣಿಮೆಯು ಗ್ರಾಮಗಳಲ್ಲಿ ವಿಶೇಷವಾದರೇ, ಸಂಪ್ರದಾಯದಂತೆ ನಗರಗಳಲ್ಲಿ ಮಣ್ಣಿನಿಂದ ತಯಾರಿಸಲಾದ ಎತ್ತುಗಳನ್ನು ಮನೆಮನೆಗೆ ತಂದು, ಕೊಡಬಳಿಗೆ ಮಾಡಿ, ಪೂಜೆ ಗೈಯುವದು ನಡೆದುಬಂದಿದೆ. ಜಾಗತಿಕ ತಂತ್ರಜ್ಞಾನ ಯುಗದಲ್ಲಿಯೂ ಕೂಡ ಉತ್ತರ ಕರ್ನಾಟಕದ ಬಹುತೇಕ ಪಟ್ಟಣ-ನಗರಗಳಲ್ಲಿ ಇಂತಹ ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ.
ಎತ್ತು ಸಾಮಗ್ರಿ ಮಾರಾಟಕ್ಕೆ ಹೆಸರುವಾಸಿ- ಮಹಾಲಿಂಗಪೂರ ಪಟ್ಟಣದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿದ್ದು. ಅದರಲ್ಲೂ ಪ್ರಮುಖವಾಗಿ ಢವಳೇಶ್ವರ, ಸಂಗಾನಟ್ಟಿ, ಕೆಸರಗೊಪ್ಪ, ನಂದಗಾಂವ, ಮದಬಾವಿ, ಚಿಮ್ಮಡ, ಬೆಳಗಲಿ, ಕೊಡಿಹಳ್ಳ ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ರೈತರು ಪಟ್ಟಣಕ್ಕೆ ಬಂದು ಕೃಷಿ ಹಾಗೂ ಕಾರಹುಣ್ಣಿಮೆ ಸಂಬಂಧಿತ ಸಾಮಗ್ರಿಗಳನ್ನು ಖರಿದಿ ಮಾಡುತ್ತಾರೆ. ರೈತರಿಂದಲೇ ಈ ಭಾಗದ ವ್ಯಾಪಾರ-ವಹಿವಾಟಗಳು ಜೋರಾಗಿ ನಡೆಯುತ್ತವೆ. ಅಂತೆಯೆ ಕಾರಹುಣ್ಣಿಮೆ ನಿಮಿತ್ಯ ಪಟ್ಟಣದಲ್ಲಿ ಹತ್ತಾರು ಅಂಗಡಿಗಳನ್ನು ತೆರೆಯಲಾಗಿದ್ದು. ಈ ಅಂಗಡಿಗಳಲ್ಲಿ ಕಾರಹುಣ್ಣಿಮೆಯ ಹಬ್ಬಕ್ಕೆ ರೈತರಿಗೆ ಬೇಕಾದ ಕ್ಯಾಮಿ ಸೇರಿದಂತೆ ಬಗೆಬಗೆಯ ಬಣ್ಣ, ಹಂಗಡ ಎಂಬ ಹಗ್ಗ, ಹಣೆ ಹಗ್ಗ ಸೇರಿದಂತೆ ಬಣ್ಣಬಣ್ಣದ ಹಗ್ಗ, ಕೋಲು, ಬಾರಕೋಲ, ಆಕಳಿಗೆ ಕಟ್ಟುವ ಗೆಜ್ಜೆ, ಲಗಾಮು, ಹಣಿಪಟ್ಟ ಸೇರಿದಂತೆ ಹಲವು ವಸ್ತುಗಳು ಭರ್ಜರಿಯಿಂದ ಮಾರಾಟವಾಗುತ್ತವೆ.
ರೈತನ ಬೆನ್ನೆಲುಬು ಕೃಷಿಯಾದರೇ, ಎತ್ತುಗಳು ಆತನ ಜೀವನದ ಭಾಗ. ಸಂಪ್ರದಾಯಗಳು ಭಾರತದ ಸಂಸ್ಕೃತಿಯ ಭಾಗಗಳಾಗಿ ರೈತ ಮನೆಮನಗಳಲ್ಲಿ ಹಾಸುಹೊಕ್ಕಿವೆ. ಇಂತಹ ರೈತಸಂಪ್ರದಾಯಗಳಿಂದ ಸಮೃದ್ದಿಯ ಸಂತೃಪ್ತಿಯ ಜೀವನ ಎಂಬುದು ಚಿಂತಕರ ಅಭಿಪ್ರಾಯ.

loading...