ಬಾಗಲಕೋಟೆಯಲ್ಲಿ: ಬಿವಿಐ ಸಮಾವೇಶ

0
18
loading...

ಬಾಗಲಕೋಟೆ: ಭಾವಸಾರ ಕ್ಷತ್ರೀಯ ಸಮಾಜಕ್ಕೆ ಪುರಾತನ ಇತಿಹಾಸವಿದ್ದು, ದೇಶಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿರುವ ಸಮಾಜ ಬೇರೆ ಬೇರೆ ರಾಜ್ಯಗಳಲ್ಲಿ ಹಂಚಿಹೋಗಿದೆ, ಈ ಸಮಾಜದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಭಾವಸಾರ ವಿಷನ್ ಇಂಡಿಯಾ (ಬಿವಿಐ) ಕಾರ್ಯೋನ್ಮುಖಗೊಂಡಿದೆ ಎಂದು ಬಿವಿಐ ಸಂಸ್ಥಾಪಕ, ಉದ್ದಿಮೆದಾರ ನಾರಾಯಣರಾವ ತಾತೂಸ್ಕರ ಹೇಳಿದರು.

ನವನಗರದ ಅಂಬೇಡ್ಕರ ಭವನದಲ್ಲಿ ಭಾನುವಾರ ನಡೆದ ಭಾವಸಾರ ವಿಷನ್ ಇಂಡಿಯಾದ ಬಳ್ಳಾರಿ ವಲಯದ (ಏರಿಯಾ 109) ಸಮಾವೇಶವಾದ ಸಂಭ್ರಮ-2018ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದ್ಯ ರಾಷ್ಟ್ರದ 20 ರಾಜ್ಯಗಳ ಪ್ರತಿ ಜಿಲ್ಲೆ, ಪಟ್ಟಣಗಳಲ್ಲಿ ಬಿವಿಐ ಉತ್ಸುಕತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ರೋಟರಿ ಹಾಗೂ ಲಯನ್ಸ್ ಕ್ಲಬ್ ರೀತಿಯೇ ಎಲ್ಲಾ ಸಾಮಾಜಿಕ ಚಟುವಟಿಕೆಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳುತ್ತಿದೆ, ಕರ್ನಾಟಕದಲ್ಲಿ ಜನಸಂಖ್ಯೆಯಲ್ಲಿ ಕಡಿಮೆ ಪ್ರಮಾಣದಲ್ಲಿ, ಬಡ ಸ್ಥಿತಿಯಲ್ಲಿದ್ದೇವೆ, ಅವರನ್ನು ಎಲ್ಲಾ ಆಯಾಮಗಳಲ್ಲಿಯೂ ಮೇಲೆತ್ತಲು ಬಿವಿಐ ಸನ್ನದ್ಧವಾಗಿದೆ. ಹಲವಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸ್ವ ಉದ್ಯೋಗ ಕೈಗೊಳ್ಳಲು ನೆರವಾಗಿದೆ. ಸಮಾಜದ ಜನ ಕೇವಲ ನೌಕರಿಯ ಬೆನ್ನು ಬೀಳದೇ ವಿಶಾಲ ಮನೋಭಾವನೆ ಬೆಳೆಸಿಕೊಂಡು, ಸೃಜನಾತ್ಮಕತೆಯಿಂದ ಹೊಸ ಹೊಸ ವ್ಯಾಪಾರ ವಹಿವಾಟು ಆರಂಭಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಸೇವಾ ಮನೋಭಾವನೆ, ನಾಯಕತ್ವದ ಗುಣ, ಕೂಡಿ ಬಾಳುವುದು ಹೀಗೆ ನಾನಾ ಉದ್ದೇಶಗಳನ್ನಿಟ್ಟುಕೊಂಡಿರುವ ಬಿವಿಐ ಸೇರಿದಂತೆ ನಾನಾ ಸಮಾಜಸೇವಾ ಸಂಘಟನೆಗಳ ಅಂತಿಮ ಉದ್ದೇಶ ದೇಶದ ಹಿತ ಹಾಗೂ ಪ್ರಗತಿ ಎಂದರು. ಕೂಡಿ ಕೆಲಸ ಮಾಡುವುದರಿಂದ ದೇಶದ ಐಕ್ಯತೆ ಸದೃಢವಾಗುತ್ತದೆ ಎಂದರು. ಇಡೀ ಸಮಾವೇಶದ ಅಧ್ಯಕ್ಷತೆಯನ್ನು ಸುರೇಶ ಉತ್ತರಕರ ಗುರೂಜಿ ವಹಿಸಿದ್ದರು.

ಪಂಢರಪುರದ ಯಶವಂತ ಬೋಧಲೆ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು. 109 ಏರಿಯಾ ಗವರ್ನರ್ ದತ್ತಾತ್ರೇಯ ಚೌಧರಿ, ಅಖಿಲ ಭಾರತ ಭಾವಸಾರ ಕ್ಷತ್ರೀಯ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹಾದೇವ ಪತಂಗೆ, ಚುನಾಯಿತ ಅಧ್ಯಕ್ಷ ಕಿಶನ್‍ರಾವ ಘಡಾಳೆ, ಬಿವಿಐ ರಾಷ್ಟ್ರೀಯ ಅಧ್ಯಕ್ಷ ಗಜೇಂದ್ರನಾಥ ಮಾಳೋಡೆ, ಕಾರ್ಯದರ್ಶಿ ಶ್ರೀನಿವಾಸ ದೇವಳೆ, ಡೆಪ್ಯೂಟಿ ಗವರ್ನರ್ ಸುಭಾಸಚಂದ್ರ ಕೋಳೇಕರ, ಜಯಶ್ರೀ ತಾತೂಸ್ಕರ, ಪ್ರಶಾಂತ ಹಂಚಾಟೆ ಸೇರಿದಂತೆ ಇತರರು ಇದ್ದರು.
ಬಿವಿಐ ಬಾಗಲಕೋಟೆ ಕ್ಲಬಸ್ ಅಧ್ಯಕ್ಷ ದಯಾನಂದ ಕರ್ಣೆ ಸ್ವಾಗತಿಸಿದರು. ಭಾಗ್ಯಶ್ರೀ ದೇವಗಿರಕರ, ರೇಣುಕಾರಾಜ ಮಹೇಂದ್ರಕರ, ಸುಧೀರ ದೇವಗಿರಿಕರ ನಿರೂಪಿಸಿದರು. ಸುಭಾಸಚಂದ್ರ ಕೋಳೇಕರ ವಂದಿಸಿದರು.

loading...