ಬಾಲಕಾರ್ಮಿಕ ನಿರ್ಮೂಲನೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಅತ್ಯವಶ್ಯಕ: ಪ್ರಭಾಕರ್‍ರಾವ್

0
9
loading...

ವಿಜಯಪುರ: ಪ್ರತಿಯೊಂದು ಮಗುವಿಗೆ ಉತ್ತಮ ಶಿಕ್ಷಣ, ಆರೋಗ್ಯ, ವಾತಾವರಣ ಕಲ್ಪಿಸಿಕೊಡುವುದರ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭಾಕರ್‍ರಾವ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಸಿದ್ದೇಶ್ವರ ಕಲಾಭವನದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಂವಿಧಾನದ ಕಲಂ 51(ಎ) ಪ್ರಕಾರ 6 ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರಕುವಂತೆ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಆದರೆ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಕುರಿತು ಅವುಗಳ ಪಡೆಯುವ ಕುರಿತು ನಮ್ಮಲ್ಲಿ ಅರಿವು ಮೂಡಬೇಕು. 1980ರ ಬಾಲಕಾರ್ಮಿಕ ನಿಷೇಧ ಕಾಯ್ದೆ ಪ್ರಕಾರ ಹಾನಿಕಾರಕ ಉದ್ಯಮಗಳಲ್ಲಿ ಮಕ್ಕಳನ್ನು ದುಡಿಮೆಗೆ ಬಳಸುವಂತಿಲ್ಲ. ಒಂದು ವೇಳೆ ಬಳಸಿದ್ದಲ್ಲಿ ಸಂಬಂಧಿಸಿದ ವ್ಯಕ್ತಿಗೆ ಕನಿಷ್ಠ 3 ವರ್ಷ ಸಜೆ ಹಾಗೂ 10 ರಿಂದ 20 ಸಾವಿರ ರೂ. ವರೆಗಿನ ದಂಡ ಸಹಿತ ಶಿಕ್ಷೆಗೆ ಗುರಿಯಾಗುತ್ತಾನೆ ಎಂದು ಹೇಳಿದರು. ಬಾಲಕಾರ್ಮಿಕ ನಿಷೇಧ ಕಾನೂನು ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಸಾರ್ವಜನಿಕರೂ ಸಹ ಸಹಕಾರ ನೀಡಬೇಕು. ಅಂದಾಗ ಮಾತ್ರ ಬಾಲಕಾರ್ಮಿಕದಂತಹ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯವಿದೆ ಎಂದು ಹೇಳಿದರು.

ಜನಪ್ರತಿನಿಧಿಗಳು ವಿಧಾನಸಭೆ, ಲೋಕಸಭೆಯಲ್ಲಿ ಮಕ್ಕಳ ಸಮಸ್ಯೆ, ಸಂಬಂಧಿಸಿದ ಕಾನೂನು ಜಾರಿ ಮಾಡುವ ಕುರಿತು ಚರ್ಚಿಸಬೇಕು. ಮಕ್ಕಳ ಸುಧಾರಣೆಯಿಂದ ದೇಶದ ಸುಧಾರಣೆ ಸಾದ್ಯ ಎಂದು ಹೇಳಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಎಸ್.ಜಿ.ಕುಲಕರ್ಣಿ ಅವರು ಮಾತನಾಡಿ, ಮಕ್ಕಳ ಕಾನೂನು ಕ್ರಾಂತಿಕಾರಕವಾಗಿ ಬೆಳೆಯುತ್ತಿದೆ. ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹದಂತಹ ಸಮಾಜ ಘಾತುಕ ಅಪರಾಧ ಕೃತ್ಯಗಳ ವಿರುದ್ಧ ಅನೇಕ ಕಾನೂನುಗಳಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಇಂತಹ ಮಕ್ಕಳ ಸಂಖ್ಯೆ ಹೆಚ್ಚಾಗದಂತೆ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಎಲ್ಲರೂ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಫಾದರ್ ಜೆರಾಲ್ಡ್ ಡಿಸೋಜ್, ಎಸ್.ಜೆ. ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನಾ ಸಂಘದ ಯೋಜನಾ ನಿರ್ದೇಶಕ ಶ್ರೀನಿವಾಸ ವಾಲೀಕಾರ, ಕಾರ್ಮಿಕ ಅಧಿಕಾರಿ ಶಿವಾನಂದ ಸಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧೀಕ್ಷಕ ಕೃಷ್ಣಮೂರ್ತಿ, ಬಂಡೆಪ್ಪ ತೇಲಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಸ್ವಯಂ ಸೇವಕರು ಉಪಸ್ಥಿತರಿದ್ದರು. ಮಕ್ಕಳ ಹಕ್ಕುಗಳು ಮತ್ತು ಕಾನೂನು ವಿಷಯಗಳ ಬಗ್ಗೆ ಶಾಲಾ ಮಕ್ಕಳು ಅಧಿಕಾರಿಗಳೊಂದಿಗೆ ಸಂವಾದ ನಡೆಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕಿ ವನಮಾಲಾ ರಾಠೋಡ ಮಕ್ಕಳ ಸಮಿತಿ ರಚನೆ ಮತ್ತು ಆಂತರಿಕ ದೂರು ರಚನಾ ಸಮಿತಿ ಕುರಿತು ಮಾತನಾಡಿದರು. ಪೃಥ್ವಿ ಪ್ರೌಢಶಾಲಾ ವಿದ್ಯಾರ್ಥಿನಿಯರು ನಾಡಗೀತೆ ನಡೆಸಿಕೊಟ್ಟರು. ಅನೌಪಚಾರಿಕ ಶಿಕ್ಷಣ ಸಂಸ್ಥೆಯವರು ಮಕ್ಕಳ ಹಕ್ಕುಗಳು, ಕಾನೂನು ಕುರಿತಾದ ಗೀತೆಗಳ ಮೂಲಕ ಜಾಗೃತಿ ಮೂಡಿಸಿದರು. ರಾಷ್ಟ್ರ ಪ್ರೇಮಿ ವಿದ್ಯಾ ಸಂಸ್ಥೆಯ ಶ್ರೀದೇವಿ ರಜಪೂತ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ನಗರದ ಸರಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರದೀಪ್ ಬಾಳಿಕಾಯಿ ಚಾಲನೆ ನೀಡಿದರು.

loading...