ಬುಟ್ಟಿ ತಯಾರಿಕೆಯ ಬಾಂಬು ನೀಡಲು ಅರಣ್ಯ ಇಲಾಖೆ ಒಪ್ಪಿಗೆ

0
19
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ತಮ್ಮ ಮೂಲ ಕಸುಬು ಆದ ಬುಟ್ಟಿ ತಯಾರಿಕೆಗೆ ಬಾಂಬು ನೀಡಬೇಕೆಂದು ಮಾಡಿದ ಪ್ರತಿಭಟನೆಗೆ ಸ್ಪಂದಿಸಿದ ಅರಣ್ಯ ಇಲಾಖೆಯವರು ಬಾಂಬು ನೀಡಲು ಒಪ್ಪಿದ್ದಾರೆ.
ಕಾಳಗಿನಕೊಪ್ಪ ಗ್ರಾಮದಲ್ಲಿರುವ ಕೊರವರ ಬಾಂಬು, ಬೆತ್ತದ ಬುಟ್ಟಿ ತಯಾರಿಸುವವರು ಹಾಗೂ ಮಾರಾಟ ಮಾಡುವವರ ಸಹಕಾರಿ ಸಂಘದವರು ತಮಗೆ ಬುಟ್ಟಿ ತಯಾರಿಕೆಗೆ ಬಾಂಬು ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಅರಣ್ಯ ಇಲಾಖೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

ತಮ್ಮ ಗ್ರಾಮದಲ್ಲಿ ಈ ವೃತ್ತಿ ಮಾಡುವ 60 ಕುಟುಂಬಗಳಿದ್ದು ಬುಟ್ಟಿ ತಯಾರಿಕೆಯ ವೃತ್ತಿಯಿಂದ ಉಪಜೀವನ ಮಾಡುತ್ತಾ ಬಂದಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ರಿಯಾಯತಿ ದರದಲ್ಲಿ ಅರಣ್ಯ ಇಲಾಖೆಯವರು ಬಾಂಬು ನೀಡಬೇಕೆಂದು ಕೋರಲಾಗಿತ್ತು. ಆದರೆ ಈ ವರ್ಷ ಅರಣ್ಯ ಇಲಾಖೆಯವರು ನಿಗದಿಪಡಿಸಿದ ಮಾಲವಾಡ ಗ್ರಾಮದ ಫಾರೆಸ್ಟ್ ಸರ್ವೆ ನಂ. 31 ರಲ್ಲಿ ತಮಗೆ ಅನುಕೂಲವಾಗುವ ಬಾಂಬುಗಳು ಇರುವುದರಿಂದ ಬೇರೆ ಸ್ಥಳದಲ್ಲಿ ಬಾಂಬು ನೀಡಬೇಕೆಂದು ಆಗ್ರಹಿಸಲಾಗಿತ್ತು. ಅದಕ್ಕೆ ಅರಣ್ಯ ಇಲಾಖೆಯವರು ಸರಿಯಾಗಿ ಸ್ಪಂದಿಸಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಂಘದವರು ಪ್ರತಿಭಟನೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಸಂಘದವರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಕೆಲಕಾಲ ಚರ್ಚೆಯ ನಂತರ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್. ರಮೇಶ ಅವರು ಪ್ರಸಕ್ತ ವರ್ಷ ಮಾವಿನಕೊಪ್ಪ ಹಾಗೂ ಬಾಮಣಿಕೊಪ್ಪ ಅರಣ್ಯ ಪ್ರದೇಶದಲ್ಲಿ ಬಾಂಬು ನೀಡುವಂತೆ ತಮ್ಮ ಒಪ್ಪಿಗೆ ಸೂಚಿಸಿದರು.

ತಮ್ಮ ಸಂಘದ ಸದಸ್ಯರಿಗೆ ಬುಟ್ಟಿ ತಯಾರಿಸಲು ಈ ವರ್ಷ 1400 ಬಾಂಬುಗಳು ಬೇಕಾಗಿದ್ದು ಪ್ರತಿ ಬಾಂಬುಗೆ 28 ರೂ. ಗಳಂತೆ ದರವನ್ನು ಅರಣ್ಯ ಇಲಾಖೆಗೆ ಪಾವತಿಸಲಾಗುತ್ತದೆ. ಕಟಾವು ಹಾಗೂ ಸಾಗಾಣಿಕಾ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಸಂಘದ ಅಧ್ಯಕ್ಷ ವಸಂತ ಕೊರವರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಪೀಶಣ್ಣಾ, ನಿಂಗಪ್ಪಾ, ಮಾರುತಿ, ಮನೋಹರ, ಭೀಮಪ್ಪಾ, ಸಂಜು, ಗೋವಿಂದ, ರವಿ, ಆನಂದ, ಬಸವರಾಜ ದೊಡ್ಡಗೌಡರ್, ಪೀಶಪ್ಪಾ ಮೇತ್ರಿ, ಶಿವಾಜಿ ಬೆಳವಟಗಿ, ಸಂಭಾಜಿ ದೊಡ್ಡಗೌಡಾ ಹಾಗೂ ಕಾಳಗಿನಕೊಪ್ಪ-ಬೆಳವಟಗಿ-ಸಾಂಬ್ರಾಣಿ ಗ್ರಾಮಗಳ ಮಹಿಳೆಯರು, ಮೊದಲಾದವರು ಪಾಲ್ಗೊಂಡಿದ್ದರು.

loading...