ಬೈಪಾಸ್ ಯೋಜನೆ ಜಾರಿಗೊಳಿಸಲು ನಾವು ಬಿಡುವುದಿಲ್ಲ: ನಾಯ್ಕ

0
15
loading...

ಕನ್ನಡಮ್ಮ ಸುದ್ದಿ-ಕುಮಟಾ: ಕೆಲವರ ಹಿತಾಸಕ್ತಿ ಕಾಪಾಡಲು ಬಡ ಜನರನ್ನು ಕಡೆಗಣಿಸಿ, ಬೈಪಾಸ್ ನಿರ್ಮಾಣವಾಗಬೇಕೆಂಬ ಹೇಳಿಕೆಯನ್ನು ಕಾರವಾರದಲ್ಲಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ಯಾವ ಪುರುಷಾರ್ಥಗೋಸ್ಕರ ಬೈಪಾಸ್ ನಿರ್ಮಿಸಬೇಕೆಂದು ಹೇಳುತ್ತಿದ್ದಾರೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ ಎಂದು ಬೈಪಾಸ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಜಿ ನಾಯ್ಕ ಆರೋಪಿಸಿದರು.
ಅವರು ರವಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಬಡವರಿಗೆ ತೊಂದರೆಯಾಗುವ ಈ ಬೈಪಾಸ್ ಯೋಜನೆಯನ್ನು ಜಾರಿಗೊಳಿಸಲು ನಾವು ಬಿಡುವುದಿಲ್ಲ. ಇಲ್ಲಿನ ಕೆಲ ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ಶಾಸಕ ದಿನಕರ ಶೆಟ್ಟಿ ಅವರು ಬೈಪಾಸ್ ನಿರ್ಮಾಣದಿಂದ ಕುಮಟಾದ ಅಭಿವೃದ್ಧಿ ಸಾಧ್ಯ ಎಂದು ಕಾರವಾರದಲ್ಲಿ ನೀಡಿದ ಹೇಳಿಕೆಯನ್ನು ಬೈಪಾಸ್ ವಿರೋಧಿ ಹೋರಾಟ ಸಮಿತಿಯವರು ತೀವ್ರವಾಗಿ ಖಂಡಿಸುತ್ತೇವೆ.

ಪರಿಸರ ವಿಜ್ಞಾನಿಗಳು ಬೈಪಾಸ್ ನಿರ್ಮಿಸುವ ಸಂಬಂಧ ಪಶ್ಚಿಮ ಘಟ್ಟಗಳನ್ನು ಬಲಿ ಕೊಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಗುಡ್ಡ ಕುಸಿತಗಳು ಸಂಭವಿಸುವ ಜತೆಗೆ ನೀರಿನ ಸೆಲೆಗಳು ಬತ್ತಿಹೋಗುವ ಸಾಧ್ಯತೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ವಿಜ್ಞಾನಿಗಳು ಸಂಶೋಧನಾ ವರದಿ ನೀಡಿದ್ದಾರೆ. ಹಾಗಾಗಿ ಕುಮಟಾಕ್ಕೆ ಬೈಪಾಸ್ ಅಗತ್ಯವಿಲ್ಲ. ಈ ಬೈಪಾಸ್ ಎಂಬುದು ಸಚಿವ ಆರ್ ವಿ ದೇಶಪಾಂಡೆ ಅವರ ಕನಸಿನ ಕೂಸು ಅಷ್ಟೆ. ಅದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಮಂಗಳೂರಿನಿಂದ ಗೋವಾ ಗಡಿ ವರೆಗಿನ 189 ಕಿಮೀನ ಚತುಷ್ಪಥದಲ್ಲಿ ಎಲ್ಲೂ ಬೈಪಾಸ್ ಇಲ್ಲ. ಅಲ್ಲದೇ ಹಿಂದಿನ ಜಿಲ್ಲಾಧಿಕಾರಿ ರೇಜು ಅವರು ನೀಡಿದ ವರದಿಯಲ್ಲಿ ಈಗಿನ ಹೆದ್ದಾರಿಯಲ್ಲಿ ಸಾಗುವ ಚತುಷ್ಪಥ ಯೋಜನೆಗೆ ಅಗತ್ಯವಾದ ಶೇ 88ರಷ್ಟು ಪ್ರದೇಶ ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಬಳಿ ಇದೆ. ಇನ್ನುಳಿದ ಜಮೀನನ್ನು 1960ರಲ್ಲಿ ಭೂ ಸ್ವಾಧೀನ ಮಾಡಿಕೊಂಡು, ಬಹುತೇಕರಿಗೆ ಪರಿಹಾರ ಕೂಡ ನೀಡಲಾಗಿದೆ. ಹೆದ್ದಾರಿ ಇಕ್ಕೆಲಗಳಲ್ಲಿರುವ ಬಹುತೇಕರು ಒತ್ತುಮಾಡಿಕೊಂಡವರು. ಅವರನ್ನು ಖುಲ್ಲಾಪಡಿಸಿದರೆ ಚತುಷ್ಪಥ ಕಾಮಗಾರಿಯನ್ನು ಸುಲಭವಾಗಿ ಕೈಗೊಳ್ಳಬಹುದೆಂದು ಅವರು ನೀಡಿದ ವರದಿಯಲ್ಲಿಸ್ಪಷ್ಟವಾಗಿ ತಿಳಿಸಿದ್ದಾರೆ.
ದಿನಕರ ಶೆಟ್ಟಿ ಅವರು ಶಾಸಕರಾದ ನಂತರದಲ್ಲಿ ಅವರಿಂದ ಜನರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅವರು ಮೊದಲ ಬಾರಿಗೆ ಶಾಸಕರಾದಾಗ ಅವರಿಗಷ್ಟು ಅನುಭವ ಇರಲಿಲ್ಲ. ಆದರೆ ಈಗ ಒಮ್ಮೆ ಶಾಸಕರಾದ ಅನುಭವ ಹೊಂದಿದ್ದು, ಕ್ಷೇತ್ರದ ಅಭಿವೃದ್ಧಿಯ ಕುರಿತು ಹೆಚ್ಚು ಆಸಕ್ತಿ ವಹಿಸುತ್ತಾರೆಂಬ ನಿರೀಕ್ಷೆ ಇದೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ಹಳ್ಳ ಹಿಡಿದಿದೆ. ಬಾಡದ ಸರ್ಕಾರಿ ಪದವಿ ಕಾಲೇಜ್‍ನ ಕಟ್ಟಡ ನಿರ್ಮಾಣಕ್ಕೆ ಭೂಮಿ ಖರೀದಿಸಲು ಹಲ ವರ್ಷಗಳಿಂದ ಪ್ರಯತ್ನ ಸಾಗಿದೆ. ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರ್ವೆ ಇಲಾಖೆಯ ವಿಳಂಭ ಧೋರಣೆಯಿಂದ ಜನರು ರೋಸಿಹೋಗಿದ್ದಾರೆ. ಹೀಗೆ ಲೆಕ್ಕಹಾಕುತ್ತ ಹೋದರೆ ಸಮಸ್ಯೆಗಳ ಸರಮಾಲೆ ಶಾಸಕರ ಮುಂದಿದೆ. ಇವೆಲ್ಲವನ್ನು ಬಿಟ್ಟು ಕೆಲ ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ಬಡ ಜನರನ್ನು ಕಡೆಗಣಿಸಿ, ಬೈಪಾಸ್ ನಿರ್ಮಾಣವಾಗಬೇಕೆಂಬ ಹೇಳಿಕೆಯನ್ನು ಕಾರವಾರದಲ್ಲಿ ನೀಡಿರುವುದಲ್ಲದೇ ಬೈಪಾಸ್ ನಿರ್ಮಾಣದಿಂದ ಕುಮಟಾದ ಅಭಿವೃದ್ಧಿ ಸಾಧ್ಯ ಎಂದು ಹೇಳುತ್ತಿರುವುದು ನಗೆಮಾತಾಗಿದೆ. ಬಡವರಿಗೆ ತೊಂದರೆಯಾಗುವ ಈ ಬೈಪಾಸ್ ಯೋಜನೆಯನ್ನು ಜಾರಿಗೊಳಿಸಲು ಎಂದಿಗೂ ಬಿಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಸುರೇಶ ಭಂಡಾರಿ, ವಿ ಆರ್ ನಾಯ್ಕ, ಕೆ ಸಿ ನಾಯ್ಕ, ಕುಮಾರಸ್ವಾಮಿ, ರಾಮದಾಸ ನಾಯಕ, ಕೃಷ್ಣ ನಾಯಕ, ರಾಮನಾಥ ಶಾನಭಾಗ, ಸುಬ್ರಹ್ಮಣ್ಯ ಶೇಟ್, ಸುರೇಶ ಗಾಂವ್ಕರ್, ದುರ್ಗಿ ಮುಕ್ರಿ, ಶುಶೀಲಾ ಮುಕ್ರಿ, ಕನ್ನೆ ಮುಕ್ರಿ, ಮಂಜುನಾಥ ಮುಕ್ರಿ, ಹನುಮಂತ ಮುಕ್ರಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...