ಭೂಮಿಯನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ: ನ್ಯಾ. ಪೂರ್ಣಿಮಾ

0
18
loading...

ಕನ್ನಡಮ್ಮ ಸುದ್ದಿ-ಕುಮಟಾ: ನಮಗಿರುವುದು ಒಂದೇ ಭೂಮಿ ನಾವೆಲ್ಲ “ವಸುಧೈವ ಕುಟುಂಬಕಮ್” ದ ಸದಸ್ಯರು. ಹಾಗಾಗಿ ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳುವುದು ನಮ್ಮ ಆಧ್ಯ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಪ್ರಧಾನ ಪ್ರ ದ ನ್ಯಾ ದಂಡಾಧಿಕಾರಿ ಪೂರ್ಣಿಮಾ ಎನ್ ಪೈ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಪಟ್ಟಣದ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕುಮಟಾ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಅರಣ್ಯ ಇಲಾಖೆ, ಗಿಬ್ ಫ್ರೌಢ ಶಾಲೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿ, ಮನುಷ್ಯ ಬದುಕಲು ಶುದ್ಧವಾದ ಗಾಳಿ, ಸ್ವಚ್ಛವಾದ ನೀರು ಇವು ಅತ್ಯವಶ್ಯ. ನಮಗೆ ಉಸಿರಾಡಲು ಬೇಕಾಗುವ ಆಮ್ಲಜನಕವನ್ನು ನೀಡುವ ಮರಗಳನ್ನು ನಾವು ಬೆಳೆಸಿ ಪರಿಸರಗಳನ್ನು ಉಳಿಸಬೇಕಾಗಿದೆ ಎಂದರು. ಇಂದಿನ ಪರಿಸರದ ಉಳಿವಿಗೆ ಮಾರಕವಾಗುತ್ತಿರುವುದು ಪ್ಲಾಸ್ಟಿಕ್‍ನ ಸಮಸ್ಯೆ ಹಾಗಾಗಿ ನಮ್ಮ ದಿನನಿತ್ಯದ ಜೀವನದಲ್ಲಿ ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಮಕ್ಕಳಾದ ನೀವು ಪ್ಲಾಸ್ಟಿಕ್‍ನ್ನು ಬಳಸದಂತೆ ನಿರ್ಧಾರವನ್ನು ತೆಗೆದುಕೊಳ್ಳಬೇಕಲ್ಲದೆ ನಿಮ್ಮ ಕುಟುಂಬದ ಸದಸ್ಯರಿಗೂ ಅರಿವು ಮೂಡಿಸಬೇಕು ಎಂದರು.

ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ ವಿ ಮಾತನಾಡಿ, ಪ್ಲಾಸ್ಟಿಕ್‍ನ ಉತ್ಪನ್ನಗಳು ನಾಶ ಹೊಂದಲು 700 ವರ್ಷಗಳೆ ಹಿಡಿಯುತ್ತವೆ. ಒಮ್ಮೆ ಇವು ಮಣ್ಣಿನಲ್ಲಿ ಬೆರೆತರೆ ನೇರವಾಗಿ ಪರಿಸರದ ನಾಶಕ್ಕೆ ಕಾರಣವಾಗುತ್ತದೆ. ಹಾಗಾಗಿ ಪುನರುತ್ಪಾದನೆಗೆ ಬರುವಂತಹ ಪದಾರ್ಥಗಳನ್ನೇ ಬಳಸಬೇಕು. ನಮ್ಮಲ್ಲಿ 1 ವರ್ಷದಲ್ಲಿ ಸಾಮಾನ್ಯ 4 ಸಾವಿರ ಮಿಲಿ ಮಿಟರ್‍ನಷ್ಟು ಮಳೆಯಾಗುತ್ತದೆ. ಆದರೂ ನಾವು ನೀರಿನ ಸಮಸ್ಯೆಗೆ ತುತ್ತಾಗುತ್ತಿದ್ದೇವೆ. ಇದಕ್ಕೆಲ್ಲಾ ಅರಣ್ಯ ನಾಶವೆ ಅಪ್ರತ್ಯಕ್ಷವಾಗಿ ಕಾರಣವಾಗಿದೆ. ಹಾಗಾಗಿ ಇಂದು ನಾವು ಕಾಡನ್ನು ಬೆಳೆಸಬೇಕಾಗಿದೆ ಎಂದರು.
ಗಿಬ್ ಫ್ರೌಢ ಶಾಲೆಯ ಮುಖ್ಯಾಧ್ಯಾಪಕ ಡಿ ಜಿ ಸಾಸ್ತ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ವಿ ನಾಯ್ಕ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್ ಎ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ನಾಯ್ಕ ನಿರೂಪಿಸಿದರು. ನ್ಯಾಯವಾದಿ ಆನಂದು ನಾಯಕ ವಂದಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ಶಾಲೆಯ ಆವರಣದಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಗೀಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

loading...