ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಯೋಗ ಸಹಾಯಕಾರಿ: ಹೆಗಡೆ

0
15
loading...

ಕನ್ನಡಮ್ಮ ಸುದ್ದಿ-ಕುಮಟಾ: ಯೋಗ ಒಂದು ಸಾಧನವೇ ಹೊರತು ಬಹಿರಂಗ ಶೋ ಅಲ್ಲ. ಯೋಗ ಒಂದು ಜೀವನ ಕ್ರಮ. ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಯೋಗ ಸಹಾಯಕಾರಿಯಾಗಿದೆ ಎಂದು ಯಕ್ಷಗಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ ಜಿ ಎಲ್‌ ಹೆಗಡೆ ಹೇಳಿದರು.
ಅವರು ಗುರುವಾರ ಪಟ್ಟಣದ ಗಿಬ್‌ ಪ್ರೌಢ ಶಾಲೆಯ ರಾಜೇಂದ್ರ ಪ್ರಸಾದ ಹಾಲ್‌ನಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಸಮಿತಿ, ಆರ್ಟ್‌ ಆಫ್‌ ಲಿವಿಂಗ್‌, ಅಂತರಾಷ್ಟ್ರೀಯ ಯೋಗ ದಿನಾಚರಣಾ ಸಮಿತಿ ಕುಮಟಾ ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಬದುಕಿನ ಪುರುಷಾರ್ಥಗಳನ್ನು ಸಾಧಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳುವ ದೇಹ ಶಾಸ್ತ್ರವೇ ಯೋಗ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಕುಮಟಾದ ಅಂತರಾಷ್ಟ್ರೀಯ ಯೋಗ ದಿನಾಚರಣಾ ಸಮಿತಿ ಅಧ್ಯಕ್ಷ ಎಂ ಟಿ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಭೆಯಲ್ಲಿ ಯೋಗದ ಮಹತ್ವವನ್ನು ಸಾರಿದ್ದರಿಂದ ವಿಶ್ವ ಯೋಗ ದಿನಾಚರಣೆ 4 ವರ್ಷಗಳ ಹಿಂದೆ ಜಾರಿಗೆ ಬಂದಿದೆ. ಅಂಥ ಯೋಗದ ಬೆಳಕನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ ಜಿ ಜಿ ಹೆಗಡೆ ಮತ್ತು ಪಿಎಸ್‌ಐ ಸಂಪತ್‌, ಪತಂಜಲಿ ಯೋಗ ಸಮಿತಿಯ ವಿಶ್ವೇಶ್ವರ ಭಟ್‌, ಪ್ರಮುಖರಾದ ಸುರೇಶ ಹೆಗಡೆ, ಜಿ ಎಸ್‌ ಹೆಗಡೆ, ಡಾ ಗಣಪತಿ ಭಟ್‌ ಗತಗಾಲ್‌, ಶಿಕ್ಷಕ ನಾಗೇಂದ್ರ ಭಟ್‌ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧೆಡೆ ಕಾರ್ಯಕ್ರಮ:
ಕುಮಟಾ ತಾಲೂಕಿನ ಹೊಲನಗದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭವಾದ ಯೋಗ ತರಗತಿಗೆ ಡಾ ನಾಗರಾಜ ಭಟ್‌ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳಿಂದ ದೂರವಿರಲು ಯೋಗ ಸಹಾಯಕಾರಿ. ಅಲ್ಲದೆ ಮಕ್ಕಳು ದೇಹಕ್ಕೆ ಮಾರಕವಾದ ಆಹಾರ ಪದಾರ್ಥಗಳಿಂದ ದೂರವಿರುವಂತೆ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ ಬಿ ಮುಲ್ಲಾ, ಮೂರೂರಿನ ಪ್ರಗತಿ ವಿದ್ಯಾಲಯದ ಮುಖ್ಯಾಧ್ಯಾಪಕ ಎಂ ಜಿ ಭಟ್‌ ಅವರು ಯೋಗ ಕುರಿತು ಮಾತನಾಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ದೀಪಾ ಹಿಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವರಾಮ ಭಟ್‌, ಹೊಲನಗದ್ದೆ ಗ್ರಾಪಂ ಸದಸ್ಯೆ ರಮ್ಯ ಶೇಟ್‌, ಪ್ರದೀಪ ನಾಯ್ಕ, ಎಸ್‌ಡಿಎಂಸಿ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು. ಶಾಲಾ ಮುಖ್ಯಾಧ್ಯಾಪಕ ಗಣಪತಿ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಸಿದರು. ಶಿಕ್ಷಕ ರವೀಂದ್ರ ಭಟ್‌ ಸೂರಿ ನಿರೂಪಿಸಿದರು. ಶಿಕ್ಷಕಿ ಶ್ಯಾಮಲಾ ಪಟಗಾರ ವಂದಿಸಿದರು.
ಪಟ್ಟಣದ ಚಿತ್ರಿಗಿಯ ಮಹಾತ್ಮಗಾಂಧಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕ ಎಲ್‌ ಎನ್‌ ಅಂಬಿಗ ಅವರ ನೇತೃತ್ವದಲ್ಲಿ ಯೋಗ ತರಬೇತಿಗೆ ಚಾಲನೆ ನೀಡಲಾಯಿತು. ಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಹೇಳಿಕೊಡಲಾಯಿತು. ಮುಖ್ಯಾಧ್ಯಾಪಕ ಎನ್‌ ಆರ್‌ ಗಜು ಅವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸಿದರು. ವಿದ್ಯಾರ್ಥಿಗಳೊಡನೆ ಶಿಕ್ಷಕವೃಂದದವರೆಲ್ಲರೂ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

loading...