ಮಳೆಯಿಂದ ಹಾನಿ: ಶಾಸಕ ಮುನವಳ್ಳಿ ವೈಯಕ್ತಿಕ ಪರಿಹಾರ ಘೋಷಣೆ

0
22
loading...

ಗಂಗಾವತಿ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ 20, 27 ಮತ್ತು 29ನೇ ವಾರ್ಡ ಪ್ರದೇಶಗಳಲ್ಲಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಗುಡಿಸಲುಗಳಲ್ಲಿ, ತಗಡಿನ ಶೆಡ್‍ಗಳಿಂದ ನಿರ್ಮಾಣ ಮಾಡಿರುವ ಮನೆಗಳು ಗಾಳಿಗೆ ಹಾರಿ ಹೋದ ಪರಿಣಾಮದಿಂದ ಕುಟುಂಬಗಳು ರಾತ್ರಿ ಇಡೀ ನಿದ್ರೆ ಮಾಡದೆ ಜಾಗರಣೆ ಮಾಡಿದರು.

ಈ ಪ್ರದೇಶಗಳಲ್ಲಿ ಪ್ರಭಾವಿಗಳು ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವ ಪರಿಣಾಮ ಮಳೆಯ ನೀರು ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಶಾಸಕರ ಭೇಟಿ:ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಪರಣ್ಣ ಮುನವಳ್ಳಿ ಸೋಮವಾರ ಭೇಟಿ ನೀಡಿ ನಷ್ಟ ಹೊಂದಿರುವ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ಪರಿಹಾರ ಹಣವನ್ನು ನೀಡಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ನಗರಸಭೆ ಎಇಇ ಆರ್.ಆರ್.ಪಾಟೀಲ ಮತ್ತು ನಗರಸಭೆ ಪೌರಾಯುಕ್ತ ಖಾಜಾಮೊಹಿನುದ್ದೀನರಿಗೆ ಸರಕಾರದಿಂದ ಬರುವ ಪರಿಹಾರ ಹಣವನ್ನು ಶೀಘ್ರದಲ್ಲಿ ಈ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚಿಸಿದರು.
ಮುಂದಿನ ದಿನಗಳಲ್ಲಿ ದೊಡ್ಡ ಮಳೆಯಾಗುವ ಸಾಧ್ಯತೆ ಇದ್ದು. ಈ ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನು ತಕ್ಷಣದಿಂದ ಮಾಡಬೇಕು ಮತ್ತು ಎಲ್ಲಾ ಚರಂಡಿಗಳನ್ನು ಸ್ವಚ್ಛ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ ಕಾಮದೊಡ್ಡಿ, ಬಿಜೆಪಿ ಕಾರ್ಯದರ್ಶಿ ತಿಪ್ಪೇರುದ್ರಸ್ವಾಮಿ ವಕೀಲರು. ನಗರಸಭೆ ಸದಸ್ಯರಾದ ರಾಘವೇಂದ್ರಶೆಟ್ಟಿ, ಈಡಗೇರ ಪರಮೇಶಪ್ಪ, ರಾಮಚಂದ್ರಪ್ಪ, ಮುಖಂಡ ದೇವಪ್ಪ ಕಾಮದೊಡ್ಡಿ, ವೀರೇಶ ಬಲಕುಂದಿ, ಮನೋಹರಗೌಡ, ವೀರೇಶ ಸೂಳೆಕಲ್ ಇದ್ದರು.

loading...