ಯೋಜನೆ ಸದ್ಬಳಕೆಯಿಂದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ: ನ್ಯಾ. ಧಾರವಾಡಕರ್

0
21
loading...

ಕಾರವಾರ: ಸರ್ಕಾರದ ಯೋಜನೆಗಳ ಸದ್ಬಳಕೆಯಿಂದ ಮಾತ್ರ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಿಠಲ್ ಎಸ್.ಧಾರವಾಡಕರ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕಾರವಾರದ ಸೆಂಟ್ ಮೈಕೆಲ್ ಕಾನ್ವೆಂಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನ ಮತ್ತು ಅನಕ್ಷರತೆಯೇ ಬಾಲ ಕಾರ್ಮಿಕ ಪದ್ಧತಿಗೆ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಬಡತನ ಮತ್ತು ಅನಕ್ಷರತೆ ನಿರ್ಮೂಲನೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಈ ಯೋಜನೆಗಳ ಸದ್ಬಳಕೆ ಆಗಬೇಕು. ಆಗ ಮಾತ್ರ ಬಾಲ ಕಾರ್ಮಿಕ ಪದ್ಧತಿ ಪಿಡುಗು ನಿರ್ಮೂಲನೆ ಆಗಲಿದೆ ಎಂದರು.
ಕೃಷಿ ಪ್ರಧಾನ ರಾಷ್ಟ್ರವಾಗಿರುವುದರಿಂದ ಸಹಜವಾಗಿಯೇ ರೈತ ಕುಟುಂಬದಿಂದಲೇ ಬಾಲ ಕಾರ್ಮಿಕ ಪದ್ಧತಿ ಆರಂಭವಾಗುತ್ತದೆ. ಇದು ತಪ್ಪು ಮಕ್ಕಳಿಂದ ದುಡಿಸಿಕೊಳ್ಳುವ ಪ್ರವೃತ್ತಿಯನ್ನು ಬಿಡಬೇಕು. ಅಲ್ಲದೆ, ಸಮಾಜದ ಎಲ್ಲರೂ ಪ್ರಜ್ಞಾಪೂರ್ವಕವಾಗಿ ಬಾಲ ಕಾರ್ಮಿಕ ಪದ್ಧತೆ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ರಾಜೇಶ್ವರಿ ಕೆ.ಬಿ ಅವರು, ಇಂದಿನ ಮಕ್ಕಳು ನಾಳೆಯ ಪ್ರಜೆಗಳಲ್ಲ, ಇಂದೇ ಪ್ರಜೆಗಳಾಗಿದ್ದಾರೆ. ಸಂವಿಧಾನ ಬದ್ಧ ಬಹುತೇಕ ಹಕ್ಕುಗಳನ್ನು ಮಕ್ಕಳಿಗೆ ಜನ್ಮತಃ ಬಂದಿರುವುದರಿಂದ ಸಮಾಜದ ಒಳಿತಿಗೆ ಕಣ್ತೆರೆಯಬೇಕು. ಅನ್ಯಾಯಗಳು ಕಂಡಾಗ ನಿರ್ಭಯವಾಗಿ ಹಿರಿಯರಿಗೆ ಹೇಳಿ ಸರಿಪಡಿಸುವ ಪ್ರಯತ್ನ ಮಾಡಬೇಕು ಎಂದರು.
ಮತ್ತೊಬ್ಬ ನ್ಯಾಯವಾದಿ ಸಂಧ್ಯಾ ತಾಳೇಕರ್ ಅವರು, ಮಕ್ಕಳ ಸಾಗಣೆ ನಾಗರಿಕ ಸಮಾಜದ ಅಣಕು. ಪ್ರತಿಯೊಬ್ಬರೂ ಸಂಘಟಿತರಾಗಿ ಅಂತಹ ಅನ್ಯಾಯಗಳನ್ನು ಪ್ರತಿಭಟಿಸಬೇಕು. ಮಕ್ಕಳನ್ನು ವಿಶೇಷವಾಗಿ ಹಣ್ಣುಮಕ್ಕಳ ಸಾಗಣೆಯನ್ನು ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಹಿರಿಯ ನ್ಯಾಯವಾದಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ಅವರು, ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಮಾಣ ವಚನವನ್ನು ಘೋಷಿಸಿದರು.
ಕಾರ್ಯಕ್ರಮ ಅಂಗವಾಗಿ ಸೋಮವಾರ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಾದ ಅಕ್ಷಯ ರೇವಣಕರ (ಪ್ರಥಮ), ರಕ್ಷಿತಾ ಆರ್. ಗೌಡ (ದ್ವಿತೀಯ) ಹಾಗೂ ಐಶ್ವರ್ಯ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, 2017-18ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಕಾರವಾರ ತಾಲೂಕಿನ ವಿವಿಧ ಸರ್ಕಾರಿ ಶಾಲೆಯ ಮಕ್ಕಳಿಗೆ ಲೇಖನ ಸಾಮಗ್ರಿ ಕಿಟ್ ವಿತರಿಸಲಾಯಿತು.

ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ., ಸೆಂಟ್ ಮೈಕೆಲ್ ಶಾಲೆ ಪ್ರಾಂಶುಪಾಲರಾದ ಸಿ¸ಸ್ಟರ್ ಮರ್ಸಿ ಜಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಎಸ್.ಜಿ.ನಾಯಕ್, ವಕೀಲರ ಸಂಘದ ಅಧ್ಯಕ್ಷ ಎಸ್.ಕೆ.ಪವಾರ್, ಕರಾವಳಿ ದ್ವಿಚಕ್ರವಾಹನ ದುರಸ್ತಿ ಸಂಘದ ಅಧ್ಯಕ್ಷ ಅರುಣ್ ಎಂ.ನಾಯ್ಕ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾನಿರ್ದೇಶಕ ಕರಕಪ್ಪ ಮೇಟಿ ಮತ್ತಿತರರು ಉಪಸ್ಥಿತರಿದ್ದರು.
ಆರ್ಯ ಯುವ ಸಂಘದಿಂದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.

loading...