ರಸಗೊಬ್ಬರ ದರಪಟ್ಟಿ ಅಂಗಡಿಯಲ್ಲಿ ಪ್ರದರ್ಶಿಸಿ: ಶಕುಂತಲಾ ಸೂಚನೆ

0
13
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ರಸಗೊಬ್ಬರ ವಿತರಕರು ಆಯಾ ದಿನದ ರಸಗೊಬ್ಬರ ದರಪಟ್ಟಿಯನ್ನು ಅಂಗಡಿಯಲ್ಲಿ ಪ್ರದರ್ಶಿಸಬೇಕು ಎಂದು ತಹಶೀಲ್ದಾರ ಶಕುಂತಲಾ ಚೌಗಲಾ ತಾಲೂಕಾ ರಸಗೊಬ್ಬರ ವಿತರಕರಿಗೆ ಸೂಚಿಸಿದರು.

ಗುರುವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾ ಭವನದಲ್ಲಿ ತಾಲೂಕಿನ ವಿವಿಧ ರೈತ ಸಂಘಟನೆಗಳ ಪ್ರಮುಖರ ಮತ್ತು ರಸಗೊಬ್ಬರ ವಿತರಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಕೃಷಿ ಇಲಾಖೆಯಿಂದ ಅಗತ್ಯವಿರುವ ಪ್ರಮಾಣದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಿ ರೈತರ ಬೇಡಿಕೆಗೆ ಅನುಗುಣವಾಗಿ ಒಂಭತ್ತು ವಿತರಣಾ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದರು.

ತಾಲೂಕಿನಲ್ಲಿ ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಡಿಎಪಿ ಗೊಬ್ಬರ ದೊರೆಯುತ್ತಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿದ್ದು, ಇದಕ್ಕೆ ಕಾರಣ ಏನೆಂದು ಕೃಷಿ ಅಧಿಕಾರಿ ವೈ.ಶ್ರೀಧರ ಇವರನ್ನು ಪ್ರಶ್ನಿಸಿದರು.
ಮೂರ್ನಾಲ್ಕೂ ದಿನಗಳಿಂದ ತಾಲೂಕಿನಲ್ಲಿ ಡಿಎಪಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಉತ್ಪಾದನೆಗೆ ಅಗತ್ಯವಿರುವ ರಾಸಾಯನಿಕ ಪೂರೈಕೆ ಸ್ಥಗಿತಗೊಂಡಿದ್ದರಿಂದ ಡಿಎಪಿ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದೀಗ ಅಗತ್ಯವಿರುಷ್ಟು ಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೆಲ ವಿತರಕರು ಡಿಎಪಿ ಕೊರತೆಯನ್ನೇ ಬಂಡವಾಳವಾಗಿಸಿಕೊಂಡು ಲಭ್ಯವಿರುವ ಗೊಬ್ಬರವನ್ನು ರೈತರಿಂದ ಹೆಚ್ಚಿನ ಹಣ ಪಡೆದು ಮಾರಾಟ ಮಾಡುತ್ತಿದ್ದಾರೆ. ಇಲಾಖಾ ಸೂಚನೆಯಂತೆ ಗೊಬ್ಬರ ಖರೀದಿಸಿದ ಗ್ರಾಹಕನಿಗೆ ಬಿಲ್ ನೀಡಬೇಕು. ಆದರೆ, ವಿತರಕರು ಬಿಲ್ ನೀಡುತ್ತಿಲ್ಲ ಎಂದು ಆರೋಪಿಸಿದರು.
ಯಾವೊಬ್ಬ ವಿತರಕರು ಮೂಲ ಬೆಲೆಗಿಂತ ಹೆಚ್ಚಿಗೆ ಹಣವನ್ನು ರೈತರಿಂದ ಪಡೆಯಬಾರದು. ಒಂದು ವೇಳೆ ಪಡೆದಿದ್ದು ಸಾಬೀತಾದಲ್ಲಿ ರಸಗೊಬ್ಬರ ಮುಟ್ಟುಗೋಲು ಹಾಕಿಕೊಳ್ಳುವುದಲ್ಲದೇ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಿತ್ತನೆ ನಂತರ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ಅಗತ್ಯ ದಾಸ್ತಾನನ್ನು ಮಾಡಿಕೊಳ್ಳುವಂತೆ ತಾಲೂಕಾ ಸಹಾಯಕ ಕೃಷಿ ಅಧಿಕಾರಿಗೆ ಸೂಚಿಸಿದರು. ನಾಟಿ ಮಾಡುವ ರೈತರ ಬೇಡಿಕೆಗೆ ಅನುಗುಣವಾಗಿ ಸೆಣಬು ವಿತರಿಸಬೇಕು. ತಾಲೂಕಿನಲ್ಲಿ ಬಿಡಿ ಬೀಜ ವಿತರಣೆ ಮಾಡುವುದನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ರೈತರು ಕೃಷಿ ಇಲಾಖೆ ದೃಢೀಕರಿಸಿರುವ ಕಂಪನಿಗಳ ಬೀಜಗಳನ್ನು ಮಾತ್ರ ಖರೀದಿಸುವಂತೆ ಸೂಚನೆ ನೀಡಿದರು.
ತಾಲೂಕಾ ಸಹಾಯಕ ಕೃಷಿ ಅಧಿಕಾರಿ ವೈ.ಶ್ರೀಧರ ಮಾತನಾಡಿ, ರಸಗೊಬ್ಬರ ವಿತರಕರು ತಮ್ಮಲ್ಲಿ ರಸಗೊಬ್ಬರ ದಾಸ್ತಾನು ಇದ್ದರೂ ರೈತರಿಗೆ ನೀಡದೇ ಕೃತಕ ಅಭಾವ ಸೃಷ್ಟಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂದಿನ ಸಭೆಗೆ ಹಾಜರಾಗುವಂತೆ ಖಾಸಗಿ ವಿತರಕರು ಮತ್ತು ಕೃಷಿ ಪತ್ತಿನ ಸಹಕಾರಿ ಸಂಘಗಳ ವಿತರಕರಿಗೆ ಸೂಚನೆ ನೀಡಿದ್ದರೂ ಬಾರದ ವಿತಕರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಕೃಷಿ ಅಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ವಾಸುದೇವ ಕಮಾಟಿ, ತಾಲೂಕಾ ಗೌರವಾಧ್ಯಕ್ಷ ಮಾಲತೇಶ ಪರಪ್ಪನವರ, ತಾಲೂಕಾಧ್ಯಕ್ಷ ಮರೀಗೌಡಾ ಪಾಟೀಲ, ಕಾರ್ಯದರ್ಶಿ ರಾಜೀವ್ ದಾನಪ್ಪನವರ, ಸಹ ಕಾರ್ಯದರ್ಶಿ ರುದ್ರಪ್ಪ ಹಣ್ಣಿ, ಖಾಸಗಿ ರಸಗೊಬ್ಬರ ವಿತರಕರು, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಇತರರಿದ್ದರು.

loading...