ರಸ್ತೆಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ

0
15
loading...

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ಗಿಬ್‌ ಸರ್ಕಲ್‌ನಿಂದ ಹಳೇ ಹೆರವಟ್ಟಾದ ರೈಲ್ವೆ ಬ್ರಿಡ್ಜ ವರೆಗಿನ ರಸ್ತೆಗೆ ಬೃಹತ್‌ ಹೊಂಡಗಳು ನಿರ್ಮಾಣವಾಗಿ ಸಂಪೂರ್ಣ ಹದಗೆಟ್ಟಿರುವುದರಿಂದ ಪಾದಚಾರಿಗೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಕುಮಟಾ-ಸಿದ್ದಾಪುರ ರಸ್ತೆಯ ಗಿಬ್‌ ಸರ್ಕಲ್‌ನಿಂದ ಹಳೇ ಹೆರವಟ್ಟಾದ ರೈಲ್ವೆ ಬ್ರಿಡ್ಜ ವರೆಗಿನ 2ಕಿಮೀ ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿದ್ದು, ಪ್ರತಿ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗುತ್ತಿದ್ದು, ಆ ಹೊಂಡಗಳಿಗೆ ನೀರು ನಿಂತುಕೊಳ್ಳುವುದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಓಡಾಡಲು ಕಿರಿಕಿರಿ ಉಂಟಾಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಳ್ಳುವುದರಿಂದ ಕೆಸರು ನೀರಿನ ಪ್ರೋಕ್ಷಣೆ ಪಾದಾಚಾರಿಗಳಿಗೆ ಸಾಮಾನ್ಯವಾಗಿದೆ. ಈ ಮಾರ್ಗದಲ್ಲಿ ಮೂರು ಶಾಲೆಗಳಿರುವುದರಿಂದ ವಿದ್ಯಾರ್ಥಿಗಳ ಸಂಚಾರ ಅಧಿಕವಾಗಿದೆ. ಹೊಂಡಮಯ ರಸ್ತೆಯಲ್ಲಿ ಮಕ್ಕಳು ಸೈಕಲ್‌ ತುಳಿಯುವಾಗ ಸ್ವಲ್ಪ ಆಯತಪ್ಪಿದರೂ ಅಪಘಾತವುಂಟಾಗುತ್ತದೆ. ಅಲ್ಲದೆ ಈ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಕೂಡ ನಡೆದಿರುವುದರಿಂದ ರಸ್ತೆಯ ಒಂದು ಬದಿ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳದೀ ರಸ್ತೆಯಲ್ಲಿ ಸಂಚರಿಸುತ್ತವೆ. ಹಾಗಾಗಿ ಸದಾ ವಾಹನ ದಟ್ಟನೆಯಿಂದ ಕೂಡಿರುತ್ತದೆ. ಇಲ್ಲಿನ ರಸ್ತೆ ಹದಗೆಟ್ಟಿರುವುದರಿಂದ ವಾಹನ ಸವಾರರಿಗೆ ಈ ರಸ್ತೆಯಲ್ಲಿ ತಿರುಗಾಡುವುದ ಸವಾಲಾಗಿ ಪರಿನಮಿಸಿದೆ. ಹಾಗಾಗಿ ಈ ರಸ್ತೆಯ ಅಭಿವೃದ್ಧಿಗೆ ಪುರಸಭೆ ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಸುಬ್ರಹ್ಮಣ್ಯ ಶೇಟ್‌, ರಘುವೀರ ಶಾನಭಾಗ, ಮಂಜುನಾಥ ಶೇಟ್‌, ರಾಘವೇಂದ್ರ ಶೇಟ್‌, ವಾಸು ಶೆಟ್ಟಿ, ಮೋಹನ ಗೌಡ, ಕೃಷ್ಣ ನಾಯಕ, ರಾಘವೇಂದ್ರ ಗಾಡಿಗ, ರಾಜು ಶಾನಭಾಗ, ಅರವಿಂದ ಭಟ್‌, ನಾರಾಯಣ ಗಾಡಿಗ, ಹನುಮಂತ ಮುಕ್ರಿ, ಮಂಜುನಾಥ ಮುಕ್ರಿ, ಆಟೋ ಚಾಲಕರಾದ ಪರಮೇಶ್ವರ ಗೌಡ, ಮಹೇಶ ಭಂಡಾರಿ ಒತ್ತಾಯಿಸಿದ್ದಾರೆ.

loading...