ರಸ್ತೆ ಕಳಪೆತನ ವೀಕ್ಷಿಸಲು ಆಗಮಿಸುವಂತೆ ಜಿಲ್ಲಾಧಿಕಾರಿಗೆ ಮನವಿ

0
8
loading...

ಹಳಿಯಾಳ: 3 ಕೋಟಿ ರೂ. ವೆಚ್ಚ ಮಾಡಿ ತಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯ ಕಳಪೆತನವನ್ನು ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಗಮಿಸುವಂತೆ ಹಳಿಯಾಳ ತಾಲೂಕಿನ ಅಡಿಕೆಹೊಸೂರ ಗ್ರಾಮದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆಯಡಿ ಅಡಿಕೆಹೊಸೂರ ಗ್ರಾಮ ಸಂಪರ್ಕ ಕಲ್ಪಿಸುವ ಯೋಜನೆಗೆ 3 ಕೋಟಿ 3 ಲಕ್ಷ 60 ಸಾವಿರ ರೂ. ಅನುದಾನ ಮಂಜೂರಾಗಿದ್ದು ಕಾಮಗಾರಿ ಸಹ ನಡೆದಿದೆ. ಆದರೆ ಕಾಮಗಾರಿ ಕಳಪೆಯಾಗಿರುವುದಕ್ಕೆ ಸಾಕ್ಷಿಯಾಗಿ ಡಾಂಬರೀಕರಣ ಮಾಡಿದ ಹಲವು ಕಡೆಗಳಲ್ಲಿ ರಸ್ತೆ ಕಿತ್ತು ಹೋಗುತ್ತಿದ್ದು ಹೊಂಡಗಳಾಗುತ್ತಿವೆ. ಇದು ಅಲ್ಲದೇ ರಸ್ತೆ ಕಾಮಗಾರಿ ಮುಗಿಸದೇ ಅರ್ಧ-ಮರ್ಧ ಮಾಡಿರುವುದರಿಂದ ಮಳೆಯ ಇಂದಿನ ದಿನಮಾನಗಳಲ್ಲಿ ಬಸ್ಸು ಊರಿನವರೆಗೆ ಬರದೇ ಶಾಲಾ ಮಕ್ಕಳಿಗೆ ಹಾಗೂ ಇತರ ಗ್ರಾಮಸ್ಥರಿಗೆ ಓಡಾಡಲು ತೊಂದರೆಯಾಗುತ್ತಿದೆ.
ಈ ಬಗ್ಗೆ ಗುತ್ತಿಗೆದಾರರಿಗೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಇಂಜಿನೀಯರ್‌ಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡುವಂತೆ ಕೋರಿದ್ದಾರೆ.
ಅಡಿಕೆಹೊಸೂರ ಗ್ರಾಮದ ಪ್ರಮುಖರಾದ ತಟ್ಟಿಗೇರಿ ಗ್ರಾಮ ಪಂಚಾಯತ ಸದಸ್ಯ ನಜೀರಅಹ್ಮದ ಅಜಗಾಂವಕರ (ಸಿದ್ಧಿ) ನೇತೃತ್ವದಲ್ಲಿ ಹಸನಸಾಬ ತತ್ವಣಗಿ, ಆದಂಸಾಬ ಮುಜಾವರ, ಇಬ್ರಾಹಿಂಸಾಬ ತತ್ವಣಗಿ, ಹಸನಸಾಬ ತತ್ವಣಗಿ ನಿಯೋಗದಲ್ಲಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಜೀರ ಅಹ್ಮದ ಅವರು 17-3-2018 ರಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ ಎಂದು ದೂರು ಪತ್ರದಲ್ಲಿ ತಿಳಿಸಿದ್ದರು ಎಂಬುದನ್ನೂ ಸಹ ಇಲ್ಲಿ ಉಲ್ಲೇಖಿಸಬಹುದಾಗಿದೆ.

loading...