ರೈತರಿಗೆ ಉತ್ತಮ ಗುಣಮಟ್ಟದ ಬೀಜ ವಿತರಿಸಿ: ಸಿರಿಯಪ್ಪಗೌಡ

0
16
loading...

ಕನ್ನಡಮ್ಮ ಸುದ್ದಿ-ನರಗುಂದ: ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಒದಗಿಸಿ ಬೇಸಾಯದಲ್ಲಿ ಹೆಚ್ಚಿನ ಇಳುವರಿ ಪಡೆಯುವಂತೆ ಕೃಷಿ ಇಲಾಖೆ ಮಾಡಬೇಕು. ರೈತರು ಈ ದೇಶದ ಬೆನ್ನಲೆಬು ಎನ್ನುವುದೊಂದು ಗಾದೆ ಮಾತ್ರ ಸಿಮಿತಿವಾಗಿದೆ. ಆದರೆ ವಾಸ್ತಿವಿಕವಾಗಿ ರೈತರು ಇಂದು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ತಾಪಂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಬಿ. ಸಿರಿಯಪ್ಪಗೌಡ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಕೊಣ್ಣೂರಿನಲ್ಲಿ ಗುರುವಾರ ಕೃಷಿ ಇಲಾಖೆ ಹಮ್ಮಿಕೊಂಡದ್ದ `ಕೃಷಿ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಪಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಒದಗುವ ಸಲಕರಣೆಗಳನ್ನು ನಿಗದಿತ ಅವಧಿಯಲ್ಲಿ ದೊರೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಎನ್.ವ್ಹಿ. ಮೇಟಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ಸರ್ಕಾರ ಒದಗಿಸುವ ಎಲ್ಲ ಸವಲತ್ತುಗಳು ದೊರೆಯುವಂತೆ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಕೃಷಿ ಇಲಾಖೆಯ ಅಧಿಕಾರಿಗಳು ಸಮರ್ಪಕ ಕೆಲಸ ಮಾಡಿ ರೈತರು ಬೇಸಾಯದಲ್ಲಿ ಉತ್ತಮ ಇಳುವರಿ ಪಡೆಯುವಂತೆ ನೋಡಿಕೊಳ್ಳಬೇಕು. ಸರ್ಕಾರದ ಜೊತೆ ಎಪಿಎಂಸಿ ಸಂಪರ್ಕ ಮಾಡಿ ರೈತರ ಕಡಲೆ ಉತ್ಪನ್ನ ಖರೀದಿಸಲು ಎಲ್ಲ ಅವಕಾಶಗಳನ್ನು ಕೃಷಿ ಸಹಕಾರ ಮಾರಾಟ ಮಂಡಳಿಯಿಂದ ಮಾಡಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಒದಗುವ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಲಾಗುವುದು ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಪ್ರಭು ಯಲಿಗಾರ ಕಾರ್ಯಕ್ರಮ ಉದ್ಘಾಟಿಸಿದರು. ಸಿರಿಧಾನ್ಯ ಬೆಳೆದು ಉತ್ತಮ ಬೇಸಾಯ ಪದ್ದತಿ ಹಮ್ಮಿಕೊಳ್ಳಿ ಎಂದು ಬೆಳ್ಳೇರಿಯ ಬಸನಗೌಡ ಹಿರೇಗೌಡ್ರ ಹಾಗೂ ಸಂಗಪ್ಪ ಸಣಕಲ್ ತಿಳಿಸಿದರು.
ಕೃಷಿ ತಜ್ಞರಾದ ಡಾ. ಕುಮಾರ ಲಮಾಣಿ ಹಾಗೂ ಡಾ. ಯು.ಕೆ. ಶಾನವಾಡ ಬೆಳೆ ತಾಂತ್ರಿಕತೆ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ರೇಣುಕಾ ಅವರಾದಿ, ಗ್ರಾಪಂ ಅಧ್ಯಕೆ ಕಸ್ತೂರಿ ಬಂಧೋಜಿ, ಎನ್.ಕೆ. ಸೋಮಾಪುರ, ಎಪಿಎಂಸಿ ಕಾರ್ಯದರ್ಶಿ ವ್ಹಿ.ಡಿ. ಪಾಟೀಲ, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಆನಂದ ನರಸಣ್ಣವರ, ಎಪಿಎಂಸಿ ಸದಸ್ಯ ಶಂಕ್ರಗೌಡ ಯಲ್ಲಪ್ಪಗೌಡ್ರ, ಮುದ್ದನಗೌಡ್ರ ಉಪಸ್ಥಿತರಿದ್ದರು. ಆರ್.ಬಿ. ಚಿನಿವಾಲರ, ಶಿವಾಜೀ ಸಾಠೆ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕೊಣ್ಣೂರ ಮಹಿಳಾ ಚಕ್ರ ಡೋಲು ಕಲಾತಂಡದಿಂದ ಹಮ್ಮಿಕೊಂಡ ಆಕರ್ಷಕ ಡೊಳ್ಳು ಕುಣಿತ ನೋಡುಗರಿಗೆ ರಂಜನೆ ನೀಡಿತು.

ಫಲಾನುಭವಿಗಳಿಗೆ ಚೆಕ್ ವಿತರಣೆ:
ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಕಲ್ಲಾಪೂರದ ಭೀಮಪ್ಪ ಹಳೇಹೊಳಿಯವರಿಗೆ ಆತ್ಮಾ ಯೋಜನೆಯಲ್ಲಿ ಕೊಡಮಾಡುವ 10 ಸಾವಿರ ರೂ. ಚೆಕ್‍ನ್ನು ಕೃಷಿ ಇಲಾಖೆಯಿಂದ ವಿತರಿಸಲಾಯಿತು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಉತ್ತಮ ಸಾವಯವ ಗೊಬ್ಬರ ತಯಾರಿಸಿದ ಕಲ್ಲಾಪೂರದ 7 ಜನ ರೈತ ಫಲಾನುಭವಿಗಳಗೆ 8500 ರೂ. ಚೆಕ್‍ಗಳನ್ನು ವಿತರಣೆ ಮಾಡಲಾಯಿತು.

loading...