ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು: ಸುಭಾಷ್

0
14
loading...

ನರಗುಂದ: ಮಹದಾಯಿಗಾಗಿ ನ್ಯಾಯಾಧಿಕರಣದಲ್ಲಿ ಇದ್ದ ವಿವಾದದ ವಿಚಾರಣೆ ಆದೇಶ ಬರುವ ಅಗಷ್ಟ ಒಳಗಾಗಿ ಬರಲಿದೆ. ನಮ್ಮ ಪರವಾಗಿ ಆದೇಶ ಬರಲಿದೆ ಎಂಬ ಕೆಲ ಮಾಹಿತಿಗಳು ಲಭ್ಯವಾಗಿದ್ದು ಆದರೆ ಈ ಆದೇಶ ಬರುವವರೆಗೂ ಧರಣಿ ಮುಂದುವರೆಯಲಿದೆ. ಆದೇಶ ನಮ್ಮ ಪರವಾಗಿ ಬಾರದೇ ಹೋದಲ್ಲಿ ಹೋರಾಟ ಮಾತ್ರ ನಿಲ್ಲುವುದಿಲ್ಲವೆಂದು ಮಹದಾಯಿ ಹೋರಾಟಗಾರ ಹಿರಿಯ ಮುಖಂಡ ಸುಭಾಷ್ ಗಿರಿಯಣ್ಣವರ ತಿಳಿಸಿದರು.

ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಧರಣಿ ಮಂಗಳವಾರಕ್ಕೆ 1063 ನೇ ದಿನ ತಲುಪಿದ್ದು ಧರಣಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳ ಹಿಂದೆ ಮಹದಾಯಿಗಾಗಿ ಇಲ್ಲಿಯ ರೈತರು ರಾಷ್ಟ್ರಪತಿಗಳ ಬಳಿ ತೆರಳಿ ಆಗ್ರಹಿಸಿದ್ದರು. ಮಹದಾಯಿ ಮಾಡಲು ಇಷ್ಟವಿಲ್ಲವಾದಲ್ಲಿ ಈ ಭಾಗದಲ್ಲಿ ಈ ಯೋಜನೆಗಾಗಿ ಆಗ್ರಹಿಸಿ ಧರಣಿ ನಡೆಸಿದ ಎಲ್ಲ ರೈತರಿಗೂ ದಯಾಮರಣ ನೀಡಿ ಎಂದು ಬೇಡಿಕೆ ಇರಿಸಲಾಗಿತ್ತು. ರಾಷ್ಟ್ರಪತಿಗಳ ಕಾರ್ಯಾಲಯದ ಕಾರ್ಯದರ್ಶಿಗಳು ಕೆಲ ದಿನಗಳಲ್ಲಿ ನಿಮಗೆ ಈ ಕುರಿತು ಉತ್ತರಿಸಲಾಗುವುದೆಂದು ತಿಳಿಸಿದ್ದರು. ಆದರೆ ಎರಡು ವಾರದ ಹಿಂದೆ ರಾಷ್ಟ್ರಪತಿಗಳ ಕಾರ್ಯಾಲಯದಿಂದ ಪತ್ರ ಬಂದಿದೆ. ಇದರಲ್ಲಿ ಮಹದಾಯಿಗಾಗಿ ತಮ್ಮ ಬೇಡಿಕೆ ಇದೆ. ಇನ್ನಷ್ಟು ಬೇಡಿಕೆಗಳಿದ್ದರೆ ಅವುಗಳನ್ನು ಸಲ್ಲಿಸಿ ಎಂದು ಕಾಲಾವಕಾಶ ಕೇಳಿದ್ದಾರೆ.
ರಾಷ್ಟ್ರಪತಿಗಳ ಕಾರ್ಯಾಲಯದಿಂದ ಕಳಿಸಿದ ಮಾಹಿತಿ ಪತ್ರದಲ್ಲಿ ಮಹದಾಯಿ ಕುರಿತು ಸ್ಪಷ್ಟ ಅಂಶಗಳಿಲ್ಲ. ಪತ್ರವೂ ಅಪೂರ್ಣವಾಗಿದ್ದರಿಂದ ರಾಷ್ಟ್ರಪತಿಗಳ ಕಾರ್ಯಾಲಯದಿಂದ ಬಂದ ಈ ಮಾಹಿತಿ ಇಲ್ಲಿಯ ರೈತರನ್ನು ಬೇಜಾರು ಪಡಿಸಿದಂತಾಗಿದೆ ಎಂದು ಸಿಡಿಮಿಡಿಗೊಂಡರು.

ಮಹದಾಯಿ ಮಲಪ್ರಭೆ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್.ಬಿ. ಜೋಗಣ್ಣವರ ಮಾತನಾಡಿ, ರಾಷ್ಟ್ರಪತಿಗಳ ಕಾರ್ಯಾಲಯದಿಂದ ಬಂದ ಮಾಹಿತಿ ಪತ್ರದಲ್ಲಿ ಸವಿಸ್ತಾರವಾದ ಮಾಹಿತಿ ಇಲ್ಲ. ಈ ಕಾರಣಕ್ಕಾಗಿ ಇಲ್ಲಿಯ 4 ಜಿಲ್ಲೆಯ 9 ತಾಲೂಕಿನ ರೈತರು ಪತ್ರ ಚಳುವಳಿ ಮುಖಾಂತರ ರಾಷ್ಟ್ರಪತಿಗಳ ಕಾರ್ಯಾಲಯಕ್ಕೆ ಕಳಿಸಿಕೊಡುವ ನಿರ್ಧಾರಕ್ಕೆ ಬಂದಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಈ ಭಾಗದಲ್ಲಿ ಬಹಳಷ್ಟಿದ್ದು ರಾಷ್ಟ್ರದಲ್ಲಿಯ ಅನೇಕ ಸಮಸ್ಯೆಗಳನ್ನು ಪರಿಹರಿಸಿದಂತೆಯೇ ಉತ್ತರ ಕರ್ನಾಟಕದ ಈ ಭಾಗದ ಮಹದಾಯಿ ನೀರಿನ ವಿವಾದವನ್ನು ಪರಿಹರಿಸಿ ಎಂದು ಪತ್ರ ಚಳುವಳಿ ಮುಖಾಂತರ ರಾಷ್ಟ್ರಪತಿಗಳನ್ನು ಆಗ್ರಹಿಸಲಾಗುವುದೆಂದು ತಿಳಿಸಿದರು.
ಧರಣಿಯಲ್ಲಿ ವೀರಣ್ಣ ಗಡಗಿಶೆಟ್ಟರ, ಹನುಮಂತ ಕೋರಿ, ಈರಬಸಪ್ಪ ಹೂಗಾರ, ಮಾರುತಿ ಯಾದವ, ಅನಸಮ್ಮ ಶಿಂಧೆ, ನಾಗರತ್ನಾ ಸವಳಬಾವಿ, ಯಲ್ಲಮ್ಮ ಹನಸಿ, ರಾಯವ್ವ ಕಟಗಿ, ಜೀಜಾಬಾಯಿ ಸಾಳುಂಕೆ, ರೇಣುಕಾ ಕರಿಯಪ್ಪನವರ, ಗಂಗಮ್ಮ ಹಡಪದ ಅನೇಕರು ಉಪಸ್ಥಿತರಿದ್ದರು.

loading...