ಲಿಕ್ಕರ್‌ ಮಾಫಿಯಾ ವಿರುದ್ದ ಸಿಡಿದೆದ್ದ ಜನ

0
17
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಲಿಕ್ಕರ್‌ ಮಾಫಿಯಾ ವಿರುದ್ದ ಸಿಡಿದೆದಿದ್ದರುವ ಇಲ್ಲಿನ ನಾಗರಿಕರು ಗುರುವಾರ ನಾಗರಿಕ ಸಮಿತಿ ಆಶ್ರಯದಲ್ಲಿ ಸಂಚಾಲಕ, ಬಿಜೆಪಿ ಮುಖಂಡ ಸಿಂಗನಾಳ ಪಂಪಾಪತಿ ನೇತ್ರತ್ವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪಶೆಟ್ಟಿಯವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮನವಿಯನ್ನು ಸಲ್ಲಿಸಿ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಮತ್ತು ದುಪ್ಪಟ್ಟು ಬೆಲೆಯಲ್ಲಿ ಹಣ ವಸೂಲು ಮಾಡುವದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರವು ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಜನ ಕೃಷಿ ಮತ್ತು ಶ್ರಮ ಕಾಯಕದ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಭತ್ತದ ನಾಡೇ ಎಂದು ಪ್ರಸಿದ್ದಿಯನ್ನು ಹೊಂದಿರುವ ಈ ಪಟ್ಟಣ ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಗಾಗಿ ರಾಜ್ಯ ಗಮನ ಸೆಳೆಯುತ್ತಿದೆ. ಗಂಗಾವತಿ ತಾಲೂಕಿನಾದ್ಯಂತ ಸುಮಾರು 45 ಪರವಾನಗಿ ಪಡೆದಿರುವ ಮದ್ಯದ ಅಂಗಡಿಗಳು ಮತ್ತು ಬಾರ್‌ ರೆಸ್ಟೂರೆಂಟ್‌ಗಳಿವೆ.
ಪರವಾನಗಿ ಇಲ್ಲದ ಸಹಸ್ರಾರು ಅಂಗಡಿಗಳು ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು ಇದು ಎಗ್ಗಿಲ್ಲದೆ ನಡೆದಿದೆ. ಇದಕ್ಕೆ ಲಿಕ್ಕರ್‌ ಮಾಫಿಯಾ ಕಾರಣವಾಗಿದೆ. ಕಿರಾಣಿ ಅಂಗಡಿ, ಪಾನ್‌ಶಾಪ್‌, ಹೋಟೆಲ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ.
ಅಬಕಾರಿ ಕಾನೂನುಗಳನ್ನು ಉಲ್ಲಂಘಿಸಿ ಪ್ರಾರ್ಥನಾ ಮಂದಿರ, ದೇವಸ್ಥಾನ, ಚರ್ಚ್‌, ಶಾಲಾ ಕಾಲೇಜುಗಳ ಬಳಿ ಮದ್ಯ ಮಾರಾಟ ನಡೆದಿದೆ. ಇಷ್ಟೆಲ್ಲಾ ನಡೆದರೂ ಸಂಬಂಧಿಸಿದ ಇಲಾಖೆಯವರು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಅವರು ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಕುಡುಕರ ಸಂಖ್ಯೆ ಹೆಚ್ಚಳ;ಇದರಿಂದಾಗಿ ಕುಡುಕರ ಸಂಖ್ಯೆ ಹೆಚ್ಚಾಗಿ ಅವರ ಕುಟುಂಬಗಳು ಬೀದಿಪಾಲಾಗಿವೆ. ಮನೆಯಲ್ಲಿನ ಗೃಹಣಿಯರು ತಮ್ಮ ಮಾಂಗಲ್ಯವನ್ನು ಮಾರಾಟ ಮಾಡಿರುವ ಉದಾಹರಣೆಗಳಿವೆ.
ಮುದ್ರಿತ ಬೆಲೆಗಿಂತ ದುಪ್ಪಟ್ಟು ವಸೂಲಿ:ಕುಡುಕರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡಿರುವ ಲಿಕ್ಕರ್‌ ಮಾಫಿಯಾ ಪ್ರತಿ 180 ಲೀಟರ್‌ ಬಾಟಲಿಗೆ ಸರಕಾರ ನಿಗದಿ ಪಡಿಸಿದ ದರಕ್ಕಿಂತ ದುಪ್ಪಟ್ಟು ಬೆಲೆಯಲ್ಲಿ ಮಾರಾಟ ಮಾಡಿ ಕುಡುಕರ ಶೋಷಣೆಯನ್ನು ಮಾಡುತ್ತಿದ್ದಾರೆ.
ಮುದ್ರಿತ(ಎಂ.ಆರ್‌.ಪಿ) ದರಕ್ಕಿಂತ ಹೆಚ್ಚು ಹಣ ವಸೂಲು ಮಾಡುತ್ತಿದ್ದಾರೆ. 19 ಮದ್ಯದ ಅಂಗಡಿಗಳನ್ನು ಹೊಂದಿರುವ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿಯವರು ತಮ್ಮ ಮದ್ಯದ ಅಂಗಡಿಗಳಲ್ಲಿ ಗುಂಡಾಗಳನ್ನು ಸಾಕಿಕೊಂಡು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಕುಡುಕರ ಮೇಲೆ ಗುಂಡಾಗಳು ಹಲ್ಲೆ ಮಾಡುತ್ತಾರೆ ಎಂದು ಅವರು ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ.
ಇದರ ಪರಿಣಾಮವಾಗಿ ಗಂಗಾವತಿಯಲ್ಲಿ ಕೋಮು ಗಲಭೆಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಕಾನೂನು ಭಂಗವಾಗುತ್ತಿದೆ. ಈ ಕುರಿತಂತೆ ಶಾಸಕ ಪರಣ್ಣ ಮುನವಳ್ಳಿಯವರು ಮುದ್ರಿತ ದರದಲ್ಲಿ ಮಾರಾಟ ಮತ್ತು ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಕ್ರಮ ಜರುಗಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಜುಲೈ ತಿಂಗಳಿನಲ್ಲಿ ಮದ್ಯದ ಅಂಗಡಿಗಳ ಪರವಾನಗಿ ನವೀಕರಣ ಮಾಡುವ ಸಂದರ್ಭದಲ್ಲಿ ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಅವರು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಾಲ್ಮೀಕಿನಾಯಕ ಸಮಾಜದ ಮುಖಂಡ ಜೋಗದ ನಾರಾಯಣಪ್ಪನಾಯಕ, ನಗರಸಭೆ ಸದಸ್ಯ ವಡ್ರಟ್ಟಿ ವೀರಭದ್ರಪ್ಪನಾಯಕ, ಕನ್ನಡ ಪರ ಸಂಘಟನೆ ಅಧ್ಯಕ್ಷ ರಾಜೇಶ ಅಂಗಡಿ, ಬಿಜೆಪಿ ಮುಖಂಡ ದೇವಪ್ಪ ಕಾಮದೊಡ್ಡಿ ಪಾಲ್ಗೊಂಡಿದ್ದರು.

loading...