ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿ: ಮಲ್ಲೇಶಪ್ಪ

0
18
loading...

ಬ್ಯಾಡಗಿ: ಪರಿಸರ, ಪ್ಲಾಷ್ಟಿಕ್‌ ನಿಷೇಧ, ನೀರಿನ ಮಹತ್ವ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಮಾಜಿ ಸೈನಿಕ ಹಾಗೂ ಪರಿಸರ ಪ್ರೇಮಿ ಮಲ್ಲೇಶಪ್ಪ ಚಿಕ್ಕಣ್ಣನವರ ತಿಳಿಸಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭ್ರಷ್ಟಾಚಾರ ವಿರೋಧಿ ಅಂದೋಲನ ಜಿಲ್ಲಾ ಘಟಕ ಏರ್ಪಡಿಸಿದ ಹಸಿರು ಸಿರಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಮಕ್ಕಳಲ್ಲಿ ದೇಶಭಕ್ತಿ ಹಾಗೂ ಪರಿಸರ ಪ್ರೇಮ ಬೆಳೆಸುವ ಸಂಕಲ್ಪದೊಂದಿಗೆ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದೇನೆ. ಸ್ಥಳೀಯ ಮಾದರಿ ಶಾಲೆಯನ್ನು ದತ್ತು ತೆಗೆದುಕೊಂಡು ಆವರಣದಲ್ಲಿ ಸಸಿ ನೆಟ್ಟು ಪೋಷಿಸುವ ನಿರ್ಧಾರ ಕೈಗೊಂಡು, ಮಕ್ಕಳ ತಂಡ ಕಟ್ಟಿಕೊಂಡು ಪ್ರತಿಯೊಂದು ಮಗು ಶಾಲೆಯ ಆವರಣದಲ್ಲಿ ಸಸಿ ಬೆಳೆಸುವ ಸಂಕಲ್ಪ ಮಾಡಿರುವೆ ಎಂದರು.
ನಗರಗಳೆಲ್ಲ ಸಂಪೂರ್ಣ ಕಾಂಕ್ರೇಟ್‌ಮಯವಾಗಿ ಸಸ್ಯಸಂಕುಲ ಮಾಯವಾಗುತ್ತಿದ್ದು, ಎಲ್ಲಿ ನೋಡಿದರೂ ಬಿಸಿಲಿನ ತಾಪಮಾನ ಹೆಚ್ಚಾಗಿ ಸಮಸ್ಯೆ ಉಂಟಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುನಾಥ ಮಾತನಾಡಿ, ಶಾಲೆಗಳಲ್ಲಿ ಚಿಕ್ಕಚಿಕ್ಕ ಕೈತೋಟ, ಮಳೆನೀರು ಕೊಯ್ಲು, ಇಂಗುಗುಂಡಿ ನಿರ್ಮಿಸುವ ಚಿಂತನೆ ಮಾಡಲಾಗಿದೆ. ತಾಲೂಕಿನ ಪ್ರತಿಯೊಂದು ಶಾಲಾ ಕಾಲೇಜುಗಳ ಆವರಣವನ್ನು ಖಾಲಿಬಿಡದೆ, ವಿವಿಧ ಜಾತಿಯ ಸಸ್ಯಗಳನ್ನು ನೆಟ್ಟುಪೋಷಿಸಲು ತಿಳಿಸಿರುವೆ. ನಾವು ಪರಿಸರ ಜಾಗೃತಿ ಮಾಡದಿದ್ದಲ್ಲಿ ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕಬೇಕಿದೆ. ಹನಿನೀರಿನ ಮಹತ್ವ ಹಾಗೂ ಪರಿಸರ ನಾಶದ ಪರಿಣಾಮ ಕುರಿತು ವಿಶೇಷ ಉಪನ್ಯಾಸ ನಡೆಸುವೆ ಎಂದರು. ಇದಕ್ಕೂ ಮುನ್ನ ಶಾಲಾ ಆವರಣದಲ್ಲಿ 25 ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ ಎಸ್‌.ವಿ.ಪ್ರಸಾದ, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ಚಿಕ್ಕಣ್ಣರ, ಸಮಾಜ ಕಲ್ಯಾಣಾಧಿಕಾರಿ ಎಸ.ಡಿ.ಲಮಾಣಿ, ಮುಖಂಡರಾದ ಗೌರಮ್ಮ ಹೊನ್ನತ್ತಿ, ಮಾಲತೇಶ ಮಡಿವಾಳರ, ರಾಮಣ್ಣ ಕಟ್ಟಿಮನಿ, ಸಮನ್ವಯಾಧಿಕಾರಿ ಎಂ.ಎಸ.ಬಾರ್ಕಿ, ಎಸ್‌.ಯು.ಮಾಸ್ತಿ, ಪ್ರಕಾಶ ಕೊರಮರ, ಪ್ರಧಾನ ಶಿಕ್ಷಕಿ ರಾಜೇಶ್ವರಿ ಸೆಜ್ಜೇಶ್ವರಿ ಮಂಜುನಾಥ ಬೋವಿ, ಚಂದ್ರಣ್ಣ ಪೂಜಾರ, ಗುತ್ತೆವ್ವ ಹೊನ್ನಮ್ಮನವರ ಇದ್ದರು.

loading...