ವಿದ್ಯುಚ್ಛಕ್ತಿ ಕಾಮಗಾರಿಗೆ ಕುಂಟಿತ್ತ

0
11
loading...

ಕನ್ನಡಮ್ಮ ಸುದ್ದಿ-ಶಿರಸಿ: ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ಅಬಾಧಿತ ವಿದ್ಯುಚ್ಛಕ್ತಿ ಒದಗಿಸುವ ಗುರಿಯೊಂದಿಗೆ ಅನುಷ್ಠಾನಗೊಂಡಿರುವ ಕೇಂದ್ರ ಸರ್ಕಾರದ ದೀನದಯಾಳ ಗ್ರಾಮೀಣ ವಿದ್ಯುದೀಕರಣ (ಗ್ರಾಮ ಜ್ಯೋತಿ) ಯೋಜನೆ ಕಾಮಗಾರಿಯು ಗುತ್ತಿಗೆ ಕಂಪನಿಯ ನಿರಾಸಕ್ತಿಯಿಂದ ಶಿರಸಿ ತಾಲೂಕಿನಲ್ಲಿ ಕುಂಟುತ್ತ ಸಾಗಿದೆ.

ಹೆಸ್ಕಾಂನ ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ದೀನದಯಾಳ ಗ್ರಾಮೀಣ ವಿದ್ಯುದೀಕರಣ ಯೋಜನೆಯು 2017ರ ಫೆ.16ರಂದು ಅನುಷ್ಟಾನಗೊಂಡಿತ್ತು. ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆ ಪರಿಹಾರದ ಜೊತೆಗೆ ವಿತರಣಾ ಜಾಲ ವ್ಯವಸ್ಥೆಯ ಬಲವರ್ಧನೆ, ಗ್ರಾಮೀಣ ಭಾಗದ ಮನೆ ಹಾಗೂ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಫೀಡರ್ ವ್ಯವಸ್ಥೆ, ಸಬ್ ಟ್ರಾನ್ಸ್ ಮಿಷನ್ ಹಾಗೂ ವಿದ್ಯುತ್ ವಲಯದ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಈ ಯೋಜನೆಯ ಆಶಯವಾಗಿತ್ತು. ಆದರೆ ಕಾಮಗಾರಿ ಆದೇಶ ಪತ್ರದ ನಿಯಮಗಳನ್ನು ಗಾಳಿಗೆ ತೂರಿರುವ ಕಾಮಗಾರಿ ಗುತ್ತಿಗೆ ಪಡೆದ ಮುಂಬಯಿ ಮೂಲದ ಬಜಾಜ್ ಇಲೆಕ್ಟ್ರಿಕಲ್ಸ್ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಫಲಾನುಭವಿಗಳು ಸಮಸ್ಯೆಯ ಸುಳಿಗೆ ಸಿಲುಕುವಂತಾಗಿದೆ.
ಕೇವಲ 121 ಸಂಪರ್ಕ….

ಬನವಾಸಿ, ಬಿಸಲಕೊಪ್ಪ, ಹುಲೇಕಲ್ ಸೇರಿದಂತೆ ತಾಲೂಕಿನ ವಿವಿಧೆಡೆ ಈ ಯೋಜನೆಯಡಿ ಸೌಲಭ್ಯ ಮೇಲ್ದರ್ಜೆಗೇರಿಸಲು ಹಾಗೂ ನೂತನ ಸಂಪರ್ಕ ಕಲ್ಪಿಸಲು 1 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ 691 ಫಲಾನುಭವಿಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಬೇಕಿದ್ದು, ಈವರೆಗೆ 121 ಫಲಾನುಭವಿಗಳಿಗೆ ಮಾತ್ರ ಸಂಪರ್ಕ ಕಲ್ಪಿಸಲಾಗಿದೆ. ಉಳಿದವರು ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ಅಲ್ಲದೇ, ನೂತನವಾಗಿ 48.73 ಕಿಮಿ ತಂತಿ ಮಾರ್ಗ ನಿರ್ಮಿಸಬೇಕಿದ್ದರೂ ಈವರೆಗೆ ಕೇವಲ 16.81 ಕಿಮಿ ತಂತಿ ಮಾರ್ಗ ಮಾತ್ರ ನಿರ್ಮಿಸಲಾಗಿದೆ. ಇನ್ನೂ ಸಾಕಷ್ಟು ಕಿಮಿಯಷ್ಟು ತಂತಿಮಾರ್ಗ ನಿರ್ಮಾಣ ಬಾಕಿಯುಳಿದಿದ್ದು ಗ್ರಾಮೀಣ ಭಾಗದ ನಾಗರಿಕರು ಪರಿತಪಿಸುವಂತಾಗಿದೆ.
ಶೇ.25ರಷ್ಟು ಕಾಮಗಾರಿಯಾಗಿಲ್ಲ….

ಅನುಷ್ಠಾನಗೊಂಡು 14 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಗುತ್ತಿಗೆ ಕಂಪನಿಯ ವಿಳಂಬ ಧೋರಣೆಯಿಂದ ಅರ್ಹ ಫಲಾನುಭವಿಗಳು ತೊಂದರೆಗೊಳಗಾಗಿದ್ದಾರೆ. ಗುತ್ತಿಗೆ ಅವಧಿ ಮುಗಿದರೂ ಶೇಕಡಾ 25ರಷ್ಟು ಕಾಮಗಾರಿ ಆಗಿಲ್ಲ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.
ಗುತ್ತಿಗೆದಾರರಿಗೆ ಸೂಚಿಸಿ….

ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ನೂತನ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದರೂ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದೀಗ ಮಳೆಗಾಲ ಪ್ರಾರಂಭವಾಗಿದ್ದು ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ತಕ್ಷಣ ಸಂಬಂಧಪಟ್ಟವರು ಗುತ್ತಿಗೆ ಕಂಪನಿಗೆ ಕಾಮಗಾರಿಗೆ ವೇಗ ನೀಡುವಂತೆ ಆದೇಶಿಸಬೇಕು ಎನ್ನುತ್ತಾರೆ ಯೋಜನೆಯಡಿ ಅರ್ಜಿ ಸಲ್ಲಿಸಿದ ಬನವಾಸಿಯ ಮಂಜುನಾಥ ಗೌಡ.

loading...