ವೈದ್ಯಕೀಯ ಸೇವೆಯಲ್ಲಿ ನಿರ್ಲಕ್ಷ್ಯವಾದರೆ ಕಠಿಣ ಕ್ರಮ: ಉದಾಸಿ

0
16
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ವೈದ್ಯಕೀಯ ಸೇವೆಯಲ್ಲಿನ ನಿರ್ಲಕ್ಷ್ಯದೊಂದಿಗೆ, ರೋಗಿಗಳ ಆರೈಕೆಯಲ್ಲಿ ನಿಷ್ಕಾಳಜಿ ವಹಿಸಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದೆಂದು ಶಾಸಕ ಸಿ.ಎಂ. ಉದಾಸಿ ವೈದ್ಯರು, ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.

ಶನಿವಾರ ತಾಲೂಕಾ ಆಸ್ಪತ್ರೆಯಲ್ಲಿ ತಾಲೂಕಾಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರೊಂದಿಗೆ ಸಭೆ ನಡೆಸಿ, ಮಾತನಾಡಿದರು.

ವೈದ್ಯರು ದೇವರಿಗೆ ಸಮನಾಗಿದ್ದು, ರೋಗಿಗಳು ನಿಮ್ಮನ್ನು ನಂಬಿ ಆಸ್ಪತ್ರೆಗೆ ಬರುತ್ತಾರೆ. ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ. ಅದುವೇ ಪ್ರಥಮ ಚಿಕಿತ್ಸೆ. ಆಸ್ಪತ್ರಗೆ ಬರುವ ರೋಗಿಗಳಿಗೆ ಅವ್ಯಾಚ್ಚವಾಗಿ ಬಯ್ಯುವುದು, ಅಮಾನವೀಯವಾಗಿ ವರ್ತಿಸುತ್ತಾರೆಂಬ ಆರೋಪ ಕೇಳಿ ಬರುತ್ತಿದೆ. ಮತ್ತೊಮ್ಮೆ ಮರುಕಳಿಸಿದರೆ ಶಿಸ್ತುಕ್ರಮ ಖಚಿತ. ರೋಗಿಗಳ ಸಂಬಂಧಿಕರು ನಿಮ್ಮ ಕರ್ತವ್ಯಕ್ಕೆ ಅನವಶ್ಯಕ ಅಡ್ಡಿಪಡಿಸಿದರೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.

ಬೆಳಿಗ್ಗೆ 11 ಗಂಟೆಯಾದರೂ ವೈದ್ಯರು ಆಸ್ಪತ್ರೆಗೆ ಬರುವುದಿಲ್ಲ. ರಾತ್ರಿ ವೇಳೆಯಲ್ಲಿ ನಿಯೋಜಿತ ವೈದ್ಯರು ಸೇವೆಗೆ ಲಭ್ಯವಿರುವುದಿಲ್ಲ. ಕರ್ತವ್ಯದ ವೇಳೆ ಕೆಲವರು ಮದ್ಯಪಾನ ಮಾಡಿಕೊಂಡಿರುತ್ತಾರೆಂಬುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆಲ್ಲ ಇನ್ನು ಮುಂದೆ ಪೂರ್ಣವಿರಾಮ ಹಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲೂಕಾಸ್ಪತ್ರೆ ಒಳಗೊಂಡು ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊತರೆಯಿರುವ ಹುದ್ದೆಗಳ ಪಟ್ಟಿ ನೀಡಿ. ಮುಂದಿನವಾರ ಆರೋಗ್ಯ ಇಲಾಖೆ ಸಚಿವರೊಂದಿಗೆ ಮಾತನಾಡಿ ಅಗತ್ಯ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳುತ್ತೇನೆ. ಡಯಾಲಿಸಿಸ್ ಘಟಕ ಕಾರ್ಯನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರದೆ ಅನುಭವಿಗಳ ಮಾಹಿತಿ ಪಡೆದು ಕರ್ತವ್ಯ ನಿರ್ವಹಿಸುವಂತೆ ಡಯಾಲಿಸಿಸ್ ಘಟಕದ ನಿರ್ವಹಣೆ ಸಿಬ್ಬಂದಿಗೆ ಸೂಚಿಸಿದರು.

ಅಗತ್ಯ ಔಷಧವನ್ನು ಆಸ್ಪತ್ರೆಯಲ್ಲಿಯೇ ವಿತರಿಸಲಾಗುತ್ತಿದೆ. ಲಭ್ಯವಿರದ ಔಷಧಗಳನ್ನು ಜನೌಷಧ ಕೇಂದ್ರಗಳಿಲ್ಲಿ ಪಡೆದುಕೊಳ್ಳುವಂತೆ ಶಿಫಾರಸು ಮಾಡಲಾಗುತ್ತಿದೆ ಎಂದು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದರು.

ನಮ್ಮಲ್ಲಿಯೇ ಸಿಬ್ಬಂದಿ ಕೊರತೆಯಿರುವಾಗ ಬೇರೆ ತಾಲೂಕುಗಳಿಗೆ ಸಿಬ್ಬಂದಿ ಮತ್ತು ವೈದ್ಯರನ್ನು ನಿಯೋಜಿಸದಂತೆ ತಾಲೂಕಾ ವೈದ್ಯಾಧಿಕಾರಿ ಡಾ.ಮಾರುತಿ ಚಿಕ್ಕಣ್ಣನವರಿಗೆ ಸೂಚಿಸಿದರು. ಇದೆ ಸಂದರ್ಭದಲ್ಲಿ ನೂತನ ಶಾಸಕರನ್ನು ಸನ್ಮಾನಿಸಲಾಯಿತು.

ತಾಲೂಕಾಸ್ಪತ್ರೆ ಒಳಗೊಂಡು ತಾಲೂಕಿನ ಬಹುತೇಕ ಪ್ರಾಥಮಿಕ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಕೊರೆತೆಯಿದೆ. ಸಂಬಂಧಿಸಿ ಸಚಿವರೊಂದಿಗೆ ಮಾತನಾಡಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸುವೆ.

– ಸಿ.ಎಂ. ಉದಾಸಿ, ಶಾಸಕರು.

ಸಭೆಗೆ ಬಾರದ ವೈದ್ಯರು

ಶಾಸಕರು ಕರೆದಿದ್ದ ಸಭೆಯಲ್ಲಿ ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೆಂದ್ರಗಳ ವೈದ್ಯರು ಪಾಲ್ಗೊಂಡಿರಲಿಲ್ಲ. ಸಭೆಗೆ ಕಳುಹಿಸಿದ್ದ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರೆ ಆರೋಗ್ಯ ಸರಿಯಲ್ಲ ಎಂಬ ಸಬೂಬು ನೀಡಿದರು. ಸಭೆಗೆ ಬರಲಾಗದಿದ್ದ ಮಾಹಿತಿ ತಾಲೂಕಾ ಆರೋಗ್ಯಾಧಿಕಾರಿಗೂ ತಿಳಿದಿರಲಿಲ್ಲ. ಕಾರಣ ಕೇಳಿ ನೋಟಿಸ್ ನೀಡುವಂತೆ ಶಾಸಕರು ಟಿಎಚ್‍ಓಗೆ ಸೂಚಿಸಿದರು.

loading...