ವೈವಿಧ್ಯಮಯ ನಾಟಿ ತರಕಾರಿಯ ಮಲೆನಾಡು ಮೇಳ

0
19
loading...

ಶಿರಸಿ: ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲತೆ ಹಾಗೂ ಸಮಾಜಮುಖಿ ಚಟುವಟಿಕೆಗಳ ವೇದಿಕೆಯಾಗಿರುವ ಮಲೆನಾಡು ಮೇಳವು ವೈವಿಧ್ಯಮಯ ನಾಟಿ ತರಕಾರಿಗಳು, ಹೂವಿನ ಬೀಜ ಹಾಗೂ ಗಿಡಗಳು, ಅಪರೂಪದ ತಿಂಡಿ ತಿನಿಸು, ಗಡ್ಡೆಗೆಣಸುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಸಾಕ್ಷಿಯಾಯಿತು.
ಪರಿಸರಪೂರಕ ಚಟುವಟಿಕೆಯೊಂದಿಗೆ ಮಹಿಳೆಯರ ಸಬಲೀಕರಣದ ಆಶಯ ಹೊಂದಿರುವ ಇಲ್ಲಿನ ವನಸ್ತ್ರೀ ಸಂಘಟಿಸಿದ್ದ ಮಲೆನಾಡು ಮೇಳದಲ್ಲಿ ಮಹಿಳೆಯರು ಮನೆಯಂಗಳದಲ್ಲಿ ಬೆಳೆದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಪಾಕ ಪ್ರಾವಿಣ್ಯತೆ, ಬೀಜ ಹಾಗೂ ಸಸಿಗಳ ಮಾರಾಟ, ಸಂಘಟನೆಯಡಿ ಮಹಿಳೆಯರ ಉತ್ಪಾಹ ಗಮನ ಸೆಳೆಯಿತು. ಗ್ರಾಮೀಣ ಭಾಗದ ಮಹಿಳೆಯರು ಪಾಲ್ಗೊಂಡು ಸ್ವತಃ ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸುವ ಜೊತೆಗೆ ಹತ್ತಾರು ಬಗೆಯ ವಸ್ತುಗಳ ಮಾರಾಟ ಮಾಡಿದರು. ಬೇಲಿಯಂಚಿನಲ್ಲಿ ಬೆಳೆವ ದಾಸವಾಳ, ವನೌಷಧಿ ಗಿಡಗಳನ್ನು ಈ ವೇಳೆ ಮಾರಾಟ ಮಾಡಲಾಯಿತು. ಮಲೆನಾಡಿನಲ್ಲಿ ಬೆಳೆವ ಸರಿಸುಮಾರು 40ರಷ್ಟು ಬಗೆಯ ತರಕಾರಿ ಬೀಜಗಳು, ಕೈತೋಟ ಉತ್ಪನ್ನಗಳನ್ನು ಸ್ತ್ರೀಯರು ಮುಗಿಬಿದ್ದು ಖರೀದಿಸಿದರು. ಮಳೆಗಾಲಕ್ಕಾಗಿ ವಿಶೇಷವಾಗಿ ತಯಾರಿಸಿದ ಹಲಸಿನ ವಿವಿಧ ಬಗೆಯ ಹಪ್ಪಳ, ಸಂಡಿಗೆಗಳು ನಗರವಾಸಿಗರನ್ನು ಸೆಳೆದವು. ಕಸಿ ಸಸ್ಯಗಳು, ಡೇರೆ, ಸೇವಂತಿಗೆ, ಅಂಥೋರಿಯಂ, ಲಿಂಬೆ ಮುಂತಾದ ಹೂವು-ಹಣ್ಣಿನ ಗಿಡಗಳು, ಗೆಡ್ಡೆ/ಗೆಣಸು ಸಸಿಗಳು ಬಿಕರಿಯಾದವು.
ಕುಂದಾಪುರ ನಮ್ಮ ಭೂಮಿ ಸಂಘದ ಸದಸ್ಯರು ಖಾದಿ ಬಟ್ಟೆ, ಸಂಚಿ, ಮಣ್ಣಿನ ದೀಪ, ಭತ್ತದ ಮುಡಿ, ತೋರಣ, ಮರದ ಬಾಚಣಿಕೆ, ಬಳೆ, ಹಾರಗಳನ್ನು ಪ್ರದರ್ಶಿಸಿ ಜನಮೆಚ್ಚುಗೆ ಗಳಿಸಿದರು. ಅದೇ ರೀತಿ ಕುಗ್ರಾಮವಾದ ಯಲ್ಲಾಪುರ ತಾಲೂಕಿನ ಜಮ್ಮಗುಳಿಯ ಮಹಿಳೆಯರು ಕೆಸುವಿನ ಗಡ್ಡೆ, ಬಿಳಿಲು, ನಾಟಿ ಕೋಳಿ ಮೊಟ್ಟೆ, ಕಾಡು ಜೇನು, ಅರೀಶಿಣಗಳನ್ನು ಮಾರಾಟ ಮಾಡಿದರು. ಮತ್ತಿಘಟ್ಟದ ಸಿದ್ದಿ ಜನಾಂಗದ ಮಹಿಳೆಯರು ಕೆಸುವಿನಗಡ್ಡೆ, ಸುವರ್ಣಗಡ್ಡೆ, ಬೇರು ಹಲಸಿನ ಗಿಡ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಿದರು. ಹೂತನ ಜಾನ್ಮನೆ, ಚಿಕ್ಕಡಿ, ಬೆಣಗಾಂವ, ಗೋಳಿಕೊಪ್ಪ, ಕೋಡಿಗಾರ, ಶಿರಗೋಡ, ಹಾರೇಹುಲೇಕಲ್‌, ಬಕ್ಕಳ, ವಾನಳ್ಳಿ, ಬಿಸಲಕೊಪ್ಪ, ಕಾಸರಗೋಡಿನ ಸ್ನೇಹಕುಂಜ, ಕರ್ಕೊಳ್ಳಿ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶದಿಂದ ಮಹಿಳೆಯರು ಪಾಲ್ಗೊಂಡಿದ್ದರು.
ವಿವಿಧ ತಳಿಯ ಬೀಜ ಪ್ರದರ್ಶನ, ಮಾರಾಟ ನಡೆಯಿತು. ಮೇಳದ ಅಂಗವಾಗಿ ನಡೆದ ಲಿಂಬೆಯ ಖಾರ ಹಾಗೂ ಸಿಹಿ ತಿಂಡಿ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚಿನ ಮಹಿಳೆಯರು ಪಾಲ್ಗೊಂಡಿದ್ದರು.

loading...