ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಿ: ಪಾಟೀಲ್

0
48
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸಮರ್ಪಕ ಶಿಕ್ಷಕರಿಲ್ಲದೆ ಮಕ್ಕಳ ಶಿಕ್ಷಣದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಅಗತ್ಯವಿರುವ ಕಡೆ ತಕ್ಷಣ ಶಿಕ್ಷಕರನ್ನು ನಿಯೋಜಿಸುವಂತೆ ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ ಹೇಳಿದರು.
ಶುಕ್ರವಾರ ಇಲ್ಲಿಯ ತಾ.ಪಂ ಸಭಾಂಗಣದಲ್ಲಿ ಜರುಗಿದ 2018-19ನೇ ಸಾಲಿನ ಮೊದಲ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ದ್ವನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ, ತಾಲೂಕಿನಲ್ಲಿ 99 ಪ್ರಾಥಮಿಕ ಹಾಗೂ 11 ಪ್ರೌಡ ಶಾಲಾ ಶಿಕ್ಷಕರ ಕೊರತೆ ಇದ್ದು, ಅತಿಥಿ ಶಿಕ್ಷಕರಿಂದ ಅರ್ಜಿ ಪಡೆಯಲಾಗುತ್ತಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆ ಆದ ತಕ್ಷಣ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು. ಅಲ್ಲಿಯವರೆಗೆ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಗಳಿಗೆ ನಿಯೋಜಿಸುವಂತೆ ಎಲ್.ಟಿ.ಪಾಟೀಲ್ ಸಲಹೆ ನೀಡಿದರು. ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಅಕ್ಕಿಯು ಕಳಪೆ ಗುಣಮಟ್ಟದ್ದಾಗಿದೆ ಎಂದು ತಾ.ಪಂ ಸದಸ್ಯ ಜ್ಞಾನದೇವ ಗುಡಿಯಾಳ ಅರೋಪಿಸಿದರು.

ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದರು. ಮಲೇರಿಯಾದ ಬಗ್ಗೆ ಪಿಡಿಓಗಳಿಗೆ ತರಬೇತಿ ನೀಡಿ ಒಂದು ತಿಂಗಳವರೆಗೆ ಜನಜಾಗೃತಿ ಜಾಥಾ ಮಾಡಲು ತಾಲೂಕಿನ ಆರೋಗ್ಯಾಧಿಕಾರಿಗಳಿಗೆ ಎಲ್.ಟಿ.ಪಾಟೀಲ್ ಸೂಚಿಸಿದರು. ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ನರ್ಸಗಳ ಕೊರತೆ ಇದ್ದು, ಇಂದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹಗಳು ಶಿಥಿಲಾವಸ್ಥೆಯಲ್ಲಿದ್ದು ಇಲ್ಲಿ ಕಾರ್ಯನಿರ್ವಹಿಸಲು ನರ್ಸಗಳು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಬೇಕೆಂದು ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ ಒತ್ತಾಯಿಸಿದರು. ತಾಲೂಕಿನ ಮಳಗಿಯ ಸಹಾಯಕ ಕೃಷಿ ನಿರ್ದೇಶಕರ ಕೇಂದ್ರ ಕಚೇರಿಯ ಕಟ್ಟಡವು ನಿರ್ವಹಣೆ ಇಲ್ಲದೇ ಪಾಳು ಬಿದ್ದು, ಬಾವಲಿ, ಹಾವುಗಳಂತ ಹಾನಿಕಾರಕ ಪ್ರಾಣಿಗಳು ಬೀಡು ಬಿಟ್ಟಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ತಾ.ಪಂ.ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ಮುನ್ನ ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ ಶಾಸಕ ಸಿದ್ದು ನ್ಯಾಮಗೌಡ ವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿ ಶೃದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯನಿರ್ವಣಾಧಿಕಾರಿ ಎಚ್.ಪೂಜೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಜರೀನಾಬಾನು ನಾಗರೊಳ್ಳಿ, ತಾ.ಪಂ.ಸದಸ್ಯ ಗಣಪತಿ ವಡ್ಡರ, ಹಸನಸಾಬ ನಂದಿಗಟ್ಟಿ, ಸುನೀತಾ ಲಮಾಣಿ, ರಾಧಾಬಾಯಿ ಸಿಂಗನಳ್ಳಿ, ಲಕ್ಷ್ಮಿ ಜನಗೇರಿ, ಸರ್ವ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿರಿದ್ದರು. ಅಕ್ಷರದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸಾಳುಂಕೆ ನಿರೂಪಿಸಿ ವಂದಿಸಿದರು.

loading...