ಸಮುದ್ರದ ನೀರು ಕಪ್ಪಾಗಿ ಭಯಭೀತರಾದ ಸಾರ್ವಜನಿಕರು

0
26
loading...

ಕಾರವಾರ: ಇಲ್ಲಿನ ಅರೆಬೀಯನ್‌ ಸಮುದ್ರದ ನೀರು ಗುರುವಾರ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿ ಸಾರ್ವಜನಿಕರ ವಲಯದಲ್ಲಿ ಭಯ, ಕೂತೂಹಲ, ಆಶ್ವರ್ಯ ಹುಟ್ಟುಹಾಕಿತು.
ಈ ಅಪರೂಪದ ದೃಶ್ಯವನ್ನು ಗುರುವಾರ ಬೆಳಗ್ಗೆ ಮೊದಲು ಸಮುದ್ರ ತೀರದಲ್ಲಿ ವಾಯುವಿಹಾರ ನಡೆಸುವವರು ಗಮನಿಸಿದ್ದಾರೆ. ಎಂದಿನಂತೆ ಸಮುದ್ರದ ನೀರಿನ ಬಣ್ಣ ನೀಲಿ ಇರುವ ಬದಲು ಕಪ್ಪಾಗಿ ಕಂಡು ತಳಮಳಗೊಂಡಿದ್ದಾರೆ. ನಂತರ ಈ ಸುದ್ದಿ ಎಲ್ಲೆಡೆ ಹಬ್ಬಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮುದ್ರದ ತೀರದ ಬಳಿ ಕುತೂಹಲದಿಂದ ಆಗಮಿಸಿ ಕಪ್ಪು ಸಮುದ್ರ (ಬ್ಲ್ಯಾಕ್‌ ಸೀ) ನೋಡಲು ಆಗಮಿಸಿದರು.
ಸ್ಥಳೀಯ ಮೀನುಗಾರರು ಸಹ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿರುವುದರ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ. ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದುದ್ದನ್ನು ಇವರೆಗೂ ನೋಡಿಲ್ಲ ಎನ್ನುವ ಕೆಲ ಮೀನುಗಾರರು ಸರ್ಕಾರವು ಮೇ 1 ರಿಂದ ಜುಲೈ 31 ರವರೆಗೆ ಎರಡು ತಿಂಗಳುಗಳ ಕಾಲ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧ ಹೇರಿದ್ದರಿಂದ ಸಮುದ್ರದ ಮಧ್ಯ ಭಾಗದಲ್ಲೂ ಸಹ ಈ ಬದಲಾವಣೆ ಆಗಿದೆಯೋ ಎಂಬುದು ತಿಳಿದಿಲ್ಲ ಎಂದರು.
ಸಮುದ್ರದ ನೀರಿನ ಸ್ಯಾಂಪಲ್‌ ಸಂಗ್ರಹಿಸಿರುವ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಕಡಲ ಜೀವಶಾಸ್ತ್ರದ ವಿಜ್ಞಾನಿಗಳು ಇದೊಂದು ಸಹಜ ಪ್ರಕ್ರಿಯೆ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕಡಲ ಜೀವಶಾಸ್ತ್ರದ ವಿಜ್ಞಾನಿ ಪ್ರೊ. ಜಗನ್ನಾಥ ರಾಠೋಡ ಸಮುದ್ರದ ನೀರಿನ ಬಣ್ಣ ಬದಲಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ. ಕಳೆದ ನಾಲ್ಕೈದು ದಿನಗಳಲ್ಲಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿದ್ದರಿಂದ ಈ ರೀತಿಯಾಗಿದೆ. ಮಳೆ ನೀರಿನ ಜೊತೆ ಕೆರೆಕೊಳ್ಳದ ನೀರು, ಅರಣ್ಯದ ಮರಗಿಡಗಳ ಎಲೆ, ಕಸಕಡ್ಡಿಗಳು ನೇರವಾಗಿ ಸಮುದ್ರದ ನೀರಿನೊಂದಿಗೆ ಬೆರೆತಿದೆ. ಈ ಎಲ್ಲಾ ಕಸಕಡ್ಡಿಗಳನ್ನು ಸಮುದ್ರವು ತೀರದಲ್ಲಿ ಹೊರದೂಡುತ್ತಿದೆ. ಹೀಗಾಗಿ ಸಮುದ್ರದ ತೀರದಲ್ಲಿ ನಿಂತಾಗ ನಮಗೆ ಸಮುದ್ರದ ನೀರು ಕಪ್ಪಾಗಿ ಕಾಣುತ್ತಿದೆ ಎಂದರು.
ಇತ್ತೀಚೆಗೆ ಕೆಲ ತಿಂಗಳುಗಳ ಹಿಂದೆ ಕಾರವಾರ ಬಂದರಿನ ಬಳಿ ಸುಮಾರು 17 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳೆತ್ತಲಾಗಿತ್ತು. ಈ ಎಲ್ಲಾ ಹೂಳನ್ನು ಕಾರವಾರ ಬಂದರಿನ 25 ನಾಟಿಕಲ್‌ ಮೈಲ್‌ ದೂರದ ಸಮುದ್ರದ ದೂರದಲ್ಲೇ ಚೆಲ್ಲಲಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಸಮುದ್ರದಲ್ಲಿ ರಭಸವಿರುವುದರಿಂದ ಈ ಹೂಳು ತೆಗೆದ ಮಣ್ಣು ಸಮುದ್ರದ ನೀರಿನೊಂದಿಗೆ ಮಿಶ್ರಣವಾಗಿ ಈ ರೀತಿ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಅಷ್ಟೇ ಎಂದು ಕೆಲ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಈ ಸಮುದ್ರದ ನೀರಿನ ಬಣ್ಣದ ಬದಲಾವಣೆಗೆ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಕಡಲಜೀವ ಶಾಸ್ತ್ರದ ವಿಜ್ಞಾನಿಗಳು ನೀರನ್ನು ಸಂಗ್ರಹಿಸಿ ಅಧ್ಯಯನ ನಡೆಸುತ್ತಿದ್ದಾರೆ. ಸದ್ಯದಲ್ಲ್ಲಿಯೇ ಕಡಲತೀರದ ನೀರು ಕಪ್ಪು ಬಣ್ಣಕ್ಕೆ ತಿರುಗಿರುವುದರ ಬಗ್ಗೆ ನಿಖರ ಕಾರಣಗಳು ತಿಳಿಯಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

loading...