ಸರಕಾರಿ ಅಧಿಕಾರಿಗಳಿಂದಲೇ ದಲಿತರ ದೌರ್ಜನ್ಯ

0
28
loading...

ಹುಕ್ಕೇರಿ 02: ಹುಕ್ಕೇರಿ ತಾಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ದಯನ್ನವರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಕುಂದುಕೊರತೆ ನಿವಾರಣೆ ಸಭೆಯಲ್ಲಿ ಬಹುತೇಕ ದಲಿತ ಮುಖಂಡರು, ಆಹಾರ ನಿರೀಕ್ಷಕ ದಯನ್ನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಹಾರ ಇಲಾಖೆ ಕಚೇರಿಗೆ ಶಿರಸ್ತೆದಾರ ಬಡಿಗೇರ ಮುಖ್ಯಸ್ಥರಾಗಿದ್ದಾರೆ. ಆದರೆ, ಕೆಳ ಹಂತದ ಆಹಾರ ನಿರೀಕ್ಷಕ ದಯವನ್ನವರ ಕಳೆದ ನಾಲ್ಕೈದು ವರ್ಷಗಳಿಂದ ಶಿರಸ್ತೇದಾರರ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ. ಈ ಮೂಲಕ ದಯನ್ನವರ ತಮ್ಮ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ. ಇಡೀ ಆಹಾರ ಇಲಾಖೆ ಕಚೇರಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ತಾವೇ ಮುಖ್ಯಸ್ಥರಂತೆ ವರ್ತಿಸುತ್ತಿದ್ದಾರೆ ಎಂದು ದಲಿತರು ಕಿಡಿಕಾರಿದರು.
ಪಡಿತರ ಚೀಟಿಗಳ ವಿತರಣೆ, ತಿದ್ದುಪಡಿ, ಹೆಸರು ಸೇರ್ಪಡೆ ಸೇರಿದಂತೆ ಮತ್ತಿತರ ಕೆಲಸಗಳಿಗೆ ಆಹಾರ ಇಲಾಖೆ ಕಚೇರಿಗೆ ಹೋಗುವ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಇದಕ್ಕಾಗಿಯೇ ತೌಸಿಫ್ ಎಂಬಾತನನ್ನು ಕಚೇರಿಯಲ್ಲಿ ಅಕ್ರಮವಾಗಿ ಇಟ್ಟುಕೊಳ್ಳಲಾಗಿದೆ. ವಶಪಡಿಸಿಕೊಂಡ ಗೃಹೋಪಯೋಗಿ ಸಿಲಿಂಡರ್‍ಗಳನ್ನು ತಮಗೆ ಬೇಕಾದವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿದ ದಲಿತರು, ಕೂಡಲೇ ಈ ಬಗ್ಗೆ ಮೇಲಾಧಿಕಾರಿಗಳ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕಚೇರಿ ಎದುರು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಅಂಬೇಡ್ಕರ ಅಭಿವೃದ್ಧಿ ನಿಗಮದಲ್ಲಿ ಮಂಜೂರಾದ ಬೋರವೆಲ್‍ಗಳನ್ನು ಮೇಲ್ವರ್ಗದ ಜಮೀನುಗಳಲ್ಲಿ ಕೊರೆಯಿಸಲಾಗುತ್ತಿದೆ. ಈ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇಲ್ಲವಾಗಿದೆ. ಪದೇ ಪದೇ ಒಂದೇ ಕುಟುಂಬಗಳಿಗೆ ಯೋಜನೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ದಲಿತ ಮುಖಂಡರು ಆಪಾದಿಸಿದರು.
ಉಪನೊಂದಣಿ ಅಧಿಕಾರಿ ಜೆ.ಪಿ.ಶಿವರಾಜ ದಲಿತರ ಸಭೆಗಳಿಗೆ ಹಾಜರಾಗುತ್ತಿಲ್ಲ. ಅಲ್ಲದೇ ಸರ್ಕಾರಿ ಕಾರ್ಯಕ್ರಮಗಳಿಗೂ ಬರುತ್ತಿಲ್ಲ. ಶಿವರಾಜ ತಮ್ಮ ಅಧೀನದ ಕೆಳ ಹಂತದವರನ್ನು ಕಳುಹಿಸುವ ಮೂಲಕ ದಲಿತರ ಬಗ್ಗೆ ಉದಾಸೀನತೆ ತೋರುತ್ತಿದ್ದಾರೆ. ಸಂಕೇಶ್ವರ ಪಿಎಸ್‍ಐ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಖಾಸಗಿ ಶಾಲೆಗಳ ಪ್ರವೇಶಾತಿಯಲ್ಲಿ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಗ್ರಾಮಗಳಿಗೆ ಅಗತ್ಯ ಸಾರಿಗೆ ಬಸ್‍ಗಳನ್ನು ಬಿಡುತ್ತಿಲ್ಲ ಎಂದು ದಲಿತರು ಹರಿಹಾಯ್ದರು.
ಸಂಕೇಶ್ವರ ಮುಖ್ಯಾಧಿಕಾರಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಎಸ್ಸಿಎಸ್ಟಿ ಗುತ್ತಿಗೆದಾರರಿಗೆ ಕಾಮಗಾರಿ ನೀಡುತ್ತಿಲ್ಲ. ಮಂಜೂರಾದ ಮನೆಗಳ ನಿರ್ಮಾಣಕ್ಕೆ ತಡೆಹಿಡಿಯುತ್ತಿದ್ದು ಕೂಡಲೇ ಮುಖ್ಯಾಧಿಕಾರಿ ಮೇಲೆ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ದಲಿತರು ಆಗ್ರಹಿಸಿದರು.
ತಹಸೀಲದಾರ ಅಶೋಕ ಗುರಾಣಿ, ತಾಪಂ ಇಒ ಎಂ.ಎಸ್.ಬಿರಾದಾರಪಾಟೀಲ, ಸಿಪಿಐ ಪ್ರಭು ಗಂಗನಹಳ್ಳಿ, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಕೋಳಿ, ಪಿಎಸ್‍ಐ ಪ್ರಲ್ಹಾದ ಚನ್ನಗಿರಿ ಮತ್ತಿತರರು ಉಪಸ್ಥಿತರಿದ್ದರು.

loading...