ಸಿಆರ್‍ಝಡ್-2018ಕ್ಕೆ ಮೀನುಗಾರರ ವಿರೋಧ

0
22
loading...

ಕಾರವಾರ: ಸಿಆರ್‍ಝಡ್-2018 ರ ಹೊಸ ನಿಯಮಾವಳಿಗಳು ಬಂಡವಾಳಶಾಹಿಗಳ ಪರವಾಗಿದ್ದು, ಸಾಂಪ್ರದಾಯಿಕ ಮೀನುಗಾರರ ಬದುಕಿಗೆ ಮಾರಕವಾಗಿದೆ ಎಂದು ವಿರೋಧಿಸಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ನೇತೃತ್ವದಲ್ಲಿ ಹಲವಾರು ಮೀನುಗಾರರ ಸಂಘಟನೆಗಳವತಿಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸದ್ಯ ಸಿಆರ್‍ಝಡ್ -2018 ರ ಕಾಯಿದೆಯಲ್ಲಿ ಬದಲಾದ ನಿಯಮಾವಳಿ ಪ್ರಕಾರ ಸಿಆರ್‍ಝಡ್-1,2,3,4 ಮುಂತಾದ ಹಂತಗಳನ್ವಯ 100 ಮತ್ತು 50 ಮೀಟರ್ ತನಕ ಸಡಿಲಿಕೆ ನೀಡಲಾಗಿದೆ. ಮೇಲಾಗಿ ನಿರ್ದಿಷ್ಟ ವಲಯಕ್ಕೆ 50 ಮೀಟರ್ ತನಕ ಸಡಿಲಿಕೆ ನೀಡಿರುವುದರಿಂದ ಈ ವಲಯದಲ್ಲಿ ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ರೆಸಾರ್ಟ್, ಬಹುಮಹಡಿ ಕಟ್ಟಡಗಳು, ಕೈಗಾರಿಕೆಗಳು ತಲೆ ಎತ್ತಲು ಅವಕಾಶವಾಗಲಿದೆ. ಬಂಡವಾಳಶಾಹಿಗಳ ಮಧ್ಯಪ್ರವೇಶದಿಂದ ಈ ಭಾಗದ ಜಮೀನಿನ ದರ ಗಗನ ಮುಖಿಯಾಗಲಿದೆ. ಭೂಮಿ ಖರೀದಿ ವ್ಯವಹಾರ ಜೋರಾಗಲಿದೆ. ಇದರಿಂದ ಈ ವಲಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಸಾಂಪ್ರದಾಯಿಕ ಮೀನುಗಾರಿಕೆ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಿಂದಿನ ನಿಯಮಾವಳಿ ಪ್ರಕಾರ ಕೇಂದ್ರ ಸರಕಾರದ ಮತ್ಸ್ಯಾಶ್ರಯ ಯೋಜನೆಯಡಿ ಮನೆ ನಿರ್ಮಿಸುವಲ್ಲಿಯೂ ತೊಡಕಾಗಿ ಹಣ ಲ್ಯಾಪ್ಸ್ ಆದ ಉದಾಹರಣೆ ಇದೆ. ಆದರೆ ಈಗಿನ ನಿಯಮಾವಳಿ ಪ್ರಕಾರ ಮೀನುಗಾರರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶವಿದ್ದರೂ ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ. ಹೀಗಾಗಿ ಈಗಿನ ಸಿಆರ್‍ಝಡ್ ನಿಯಮಾವಳಿಯಲ್ಲಿ ಮೀನುಗಾರರಿಗೆ ಅನುಕೂಲವಾಗುವಂತಹ ಅಂಶಗಳಿಲ್ಲ. ಸಾಂಪ್ರದಾಯಿಕ ಮೀನುಗಾರರ ಬದುಕು ನಾಶ ಮಾಡುವ ಈ ನಿಯಮಾವಳಿಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಹರಿಕಂತ್ರ-ಖಾರ್ವಿ ಮೀನುಗಾರರ ಸಂಘದ ಅಧ್ಯಕ್ಷ ಕೆ.ಟಿ.ತಾಂಡೇಲ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.

loading...