ಸ್ವಾರ್ಥ ಬಿಡಿ ಸಾರ್ಥಕವಾಗಿ ಬಾಳಿ: ಶಾಸಕಿ ರೂಪಾಲಿ ಕರೆ

0
15
loading...

ಕಾರವಾರ: ತನಗಾಗಿ ಬದುಕುವುದಕ್ಕಿಂತ ಬೇರೋಬ್ಬರಿಗಾಗಿ ಬದುಕುವುದರಲ್ಲಿ ಅರ್ಥವಿದೆ. ಈ ನಿಟ್ಟಿನಲ್ಲಿ ಸ್ವಾರ್ಥವನ್ನು ಬಿಟ್ಟು ರಕ್ತದಾನದಂತಹ ನಿಸ್ವಾರ್ಥ ಸೇವೆಯ ಸಾರ್ಥಕ ಬದುಕು ಬಾಳುವಂತೆ ಶಾಸಕಿ ರೂಪಾಲಿ ನಾಯ್ಕ್‌ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸ್ವಯಂ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯ ಸ್ವಾರ್ಥಕ್ಕಾಗಿ ಏನೇ ಸಂಪಾದನೆ ಮಾಡಿದರೂ ಯಾವುದೂ ಉಳಿಯುವುದಿಲ್ಲ. ಆದರೆ ಸ್ವಾರ್ಥ ಮನೋಭಾವ ಬಿಟ್ಟು ನಿಸ್ವಾರ್ಥತೆಯಿಂದ, ಆಸೆಗಳನ್ನು ತೊರೆದು ಪರೋಪಕಾರಿಯಾಗಿ ಬೇರೊಬ್ಬರಿಗಾಗಿ ಮಾಡಿದ ಸೇವೆ ಆತ್ಮತೃಪ್ತಿ ನೀಡುತ್ತದೆ. ಬದುಕು ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು. ರಕ್ತದಾನ ಮಹತ್ವವಾದುದು. ರಕ್ತದಾನದಿಂದ ಮನುಷ್ಯನ ಆರೋಗ್ಯದಲ್ಲಿ ಮತ್ತಷ್ಟು ಚೈತನ್ಯ ಬರುತ್ತದೆ. ರಕ್ತದಾನ ಮಾಡಿದರೆ ಬೇರೊಬ್ಬರ ಜೀವ ಉಳಿಸಿದ ತೃಪ್ತಿಯೂ ಸಿಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಕ್ತದಾನದಂತಹ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ರಕ್ತದಾನಿ ಶಿರಸಿಯ ರವಿ ಹೆಗಡೆ ಗಡಿಹಳ್ಳಿ ಮಾತನಾಡಿ ರಕ್ತದಾನ ಕೇವಲ ಪ್ರಚಾರಕ್ಕಾಗಿ ಮಾಡುವುದಲ್ಲ ಆತ್ಮತೃಪ್ತಿಗಾಗಿ ಮಾಡುವಂತಹದ್ದು. ಬೇರೊಬ್ಬರ ಬದುಕಿಗೆ ನಮ್ಮ ಅಲ್ಪ ಕೊಡುಗೆ ಅಷ್ಟೆ. ಅಂತಹ ಬದುಕು ಧನ್ಯ. ಈ ನಿಟ್ಟಿನಲ್ಲಿ ಬೇರೊಬ್ಬರಿಗೆ ಸ್ಫೂರ್ತಿಯಾಗಿ ತಮ್ಮ ಬದುಕನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಶೋಕ್‌ ಮಾತನಾಡಿ, ರಕ್ತ ಯಾವುದೇ ಕಾರ್ಖಾನೆಯಲ್ಲಿ ತಯಾರಿಸುವ ವಸ್ತುವಲ್ಲ. ಅದಕ್ಕೆ ಅದು ಅತಿ ಅಮೂಲ್ಯ. ಎಷ್ಟುಬಾರಿ ರಕ್ತದನ ಮಾಡಿದೆ ಎನ್ನುವುದಕ್ಕಿಂತ ಯಾವ ಸಂದರ್ಭದಲ್ಲಿ ರಕ್ತದಾನ ಮಾಡಿದೆ ಎಂಬುದು ಬಹುಮುಖ್ಯ. ಈ ನಿಟ್ಟಿನಲ್ಲಿ ಆರೋಗ್ಯವಂತ ವ್ಯಕ್ತಿ ತಮ್ಮ ದೇಹದ ಅತ್ಯಲ್ಪ ಪ್ರಮಾಣದ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ಅಂತಹ ಸಾರ್ಥಕ ಬದುಕಿಗೆ ಮುಂದಗಬೇಕು ಎಂದರು. ರೆಡ್‌ಕ್ರಾಸ್‌ ಸಂಸ್ಥೆಯ ಅಧ್ಯಕ್ಷ ವಿ.ಎಂ ಹೆಗಡೆ, ಕಾರ್ಯದರ್ಶಿ ಜಗದೀಶ್‌, ಆರೋಗ್ಯ ಇಲಾಖೆ ಕಾರ್ಯಕ್ರಮ ಅಧಿಕಾರಿ ಮಹಬಲೇಶ್ವರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅತಿಹೆಚ್ಚುಬಾರಿ ರಕ್ತದಾನ ಮಾಡಿದ ರಕ್ತದಾನಿಗಳಾದ ರವಿ ಹೆಗಡೆ ಗಡಿಹಳ್ಳಿ, ಶ್ರೀಕೃಷ್ಣ ಕಾಮತ್‌, ಡಾ.ರವಿಕಿರಣ್‌ ಪಟವರ್ಧನ್‌, ವಿನಾಯಕ ಗೌಡ, ಡಾ.ಸಚಿನ್‌ ನಾಯಕ, ಇಂದ್ರೇಶ್‌ ಗೌಡ, ಪುರುಷೋತ್ತಮಗೌಡ, ಚೇತನ್‌ ಪಾವಸ್ಕರ್‌, ಹರೀಶ್‌ ಪಟಗಾರ, ನೇತ್ರಾವತಿ ಹಳೆಮನೆ ಮತ್ತಿತರರನ್ನು ಸನ್ಮಾನಿಸಲಾಯಿತು. ಮುಂಜಾನೆ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿವರೆಗೆ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ್‌ ಚಾಲನೆ ನೀಡಿದ್ದರು. ಜಿಲ್ಲಾ ಮಲೇರಿಯಾ ಅಧಿಕಾರಿ ಕ್ಯಾಪ್ಟನ್‌ ಡಾ.ರಮೇಶ್‌ ರಾವ್‌ ಉಪಸ್ಥಿತರಿದ್ದರು.

loading...