ಹಬ್ಬಗಳನ್ನು ಕರೆದುಕೊಂಡು ಬರುವ ಕಾರು ಹುಣ್ಣಿಮೆ

0
19
loading...

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಪ್ರದೇಶಗಳಲ್ಲಿ ಬುಧವಾರ ಕಾರು ಹುಣ್ಣಿಮೆ ನಿಮಿತ್ತ ಬಸವಣ್ಣನ ಮೂರ್ತಿಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಸಂಭ್ರಮ. ಬೆಳಿಗ್ಗೆ ನಗರದ ಹನುಮಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಮೂವತ್ತಕ್ಕೂ ಅಧಿಕ ಕುಂಬಾರರು ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿರವುದು ಸಾಮಾನ್ಯವಾಗಿತ್ತು.
ಹಬ್ಬಗಳನ್ನು ಕರೆದುಕೊಂಡು ಬರುವ ಕಾರು ಹುಣ್ಣಿಮೆ ಕನ್ನಡದ ಮೊದಲ ಹಬ್ಬವಾಗಿದೆ. ಮಣ್ಣಿನಿಂದ ತಯಾರು ಮಾಡಿದ ಎತ್ತುಗಳನ್ನು ಮನೆಗೆ ತಂದು ಪೂಜಿಸುವದರ ಜೊತೆಗೆ ಮಣ್ಣಿಗೂ ಕೂಡಾ ಪೂಜೆಯನ್ನು ಸಲ್ಲಿಸುವ ಉದ್ದೇಶದಿಂದ ಎತ್ತುಗಳನ್ನು ಪೂಜಿಸುವ ಸಂಪ್ರದಾಯ ಆಧುನಿಕ ದಿನಗಳಲ್ಲಿಯೂ ನಡೆದುಕೊಂಡು ಬಂದಿರುವದು ವಿಶೇಷ. ಇಲ್ಲಿನ ಗ್ರಾಮೀಣ ಪ್ರದೇಶದ ಜನರು ಜಾನಪದ ಸಂಸ್ಕ್ರತಿಯ ಪ್ರತಿಯೊಂದು ಕಾರ್ಯಗಳನ್ನು ತಪ್ಪದೆ ಇಂದಿನ ದಿನಗಳಲ್ಲಿ ಆಚರಿಸುತ್ತ ಬಂದಿರುವದು ಹೆಮ್ಮೆಯ ಸಂಗತಿ.
ರೈತನಿಗೆ ಮುಖ್ಯವಾಗಿ ಬೇಕಾಗಿರುವದು ಮಣ್ಣು. ಕಾರಣ ರೈತ ಒಂದು ವರ್ಷದಲ್ಲಿ ಒಟ್ಟು 5 ಬಾರಿ ಮಣ್ಣಿನ ಪೂಜೆ ಮಾಡುತ್ತಾನೆ. ಮೊದಲು ಕಾರು ಹುಣ್ಣಿಮೆ, ಗುಳ್ಳವ್ವ, ನಾಗ ಪಂಚಮಿ, ನಾಗದೇವತೆ, ಗಣೇಶ ಹಬ್ಬ ಕೊನೆಯದಾಗಿ ಗೌರಿ ಇಲ್ಲವೆ ಸೀಗೆ ಹುಣ್ಣಿಮೆ ಸಂದರ್ಭ ಮಣ್ಣಿನಿಂದ ಶೀಗವ್ವಳನ್ನು ಪ್ರತಿಷ್ಠಾಪಿಸುವ ರೂಢಿಯಿದೆ.
ಕಾರು ಹುಣ್ಣಿಮೆ ಬರುವದು ಮಳೆಗಾಲದ ಆರಂಭದಲ್ಲಿ. ರೈತ ಬೆಳೆಗಳನ್ನು ಬೆಳೆಯುವದರ ಸಲುವಾಗಿ ಮತ್ತೇ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಮೊದಲು ಮಣ್ಣಿಗೆ ಪೂಜೆ ಸಲ್ಲಿಸುತ್ತಾನೆ. ಎತ್ತುಗಳು ಹೊಲವನ್ನು ಉಳುಮೆ ಮಾಡುವದರಿಂದ ಹಿಡಿದು ಬೆಳೆದ ಬೆಳೆಗಳನ್ನು ರಾಶಿ ಮಾಡಿ ಅದನ್ನು ಮಾರಕಟ್ಟೆಗೆ ತಂದು ಮಾರಾಟ ಮಾಡಲು ಬೇಕಾಗಿರುವದು ಎತ್ತುಗಳು. ಅದಕ್ಕಾಗಿ ಎತ್ತಿಗೆ ಪೂಜೆ ಪೂಜೆ ಸಲ್ಲಿಸುವದರ ಸಲುವಾಗಿ ಈ ಕಾರು ಹುಣ್ಣಿಮೆ. ರೈತರು ತಮ್ಮ ತಮ್ಮ ಮನೆಗಳಲ್ಲಿ ಎತ್ತುಗಳನ್ನು ಸಾಕಿರುತ್ತಾರೆ. ಆ ಎತ್ತುಗಳನ್ನೇ ಪೂಜೆ ಸಲ್ಲಿಸಿದರೆ, ಎತ್ತು ಇಲ್ಲದವರು ಕುಂಬಾರರು ತಯಾರಿಸಿ ಮಣ್ಣಿನ ಎತ್ತಿನ ಮೂರ್ತಿಗಳನ್ನು ತಂದು ಪೂಜಿಸುತ್ತಾರೆ. ಎತ್ತುಗಳನ್ನು ಸ್ವಚ್ಛವಾಗಿ ತೊಳೆದು ಅವುಗಳ ದೇಹಕ್ಕೆ ವಿವಿಧ ಬಣ್ಣಗಳನ್ನು ಹಚ್ಚುವದರ ಜೊತೆಗೆ ಕೋಡುಗಳಿಗೆ ವಿಶೇಷ ಶೃಂಗಾರ ಮಾಡಿರುತ್ತಾರೆ.
ಸುಮಾರು 60ರ ವಯಸ್ಸಿನ ಈರಪ್ಪ ಕುಂಬಾರ ಮಣ್ಣಿನ ವಿಗ್ರಹಗಳನ್ನು ಮಾಡುತ್ತಿರುವದು ಬಹಳಷ್ಟು ಜನರ ಗಮನ ಸಎಳೆಯಿತು. ಕಳೆದ 40 ವರ್ಷಗಳಿಂದ ಎತ್ತುಗಳ ವಿಗ್ರಹ ಮಾಡುತ್ತಿದ್ದಾರೆ. ಅಂದಾಜು 30 ರಿಂದ 100 ರೂ.ಗಳವರೆಗೂ ಮೂರ್ತಿಗಳ ಮಾರಾಟಗೊಂಡಿದ್ದು ವಿಶೇಷವಾಗಿತ್ತು.

loading...