ಹಳಿಯಾಳದಲ್ಲಿ ಕಳ್ಳರ ಕೈಚಳಕ: ಮನೆ ದರೋಡೆ, ಕಳ್ಳತನ

0
37
loading...

ಹಳಿಯಾಳ: ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಮನೆ ದರೋಡೆ ಪ್ರಕರಣ ನಡೆದಿದೆ. ಅದೇ ರಾತ್ರಿ ಮನೆ ಕಳ್ಳತನವು ಸಹ ಆಗಿದೆ.
ಬಸ್ ನಿಲ್ದಾಣ ಸಮೀಪವಿರುವ ಆನೆಗುಂದಿ ಬಡಾವಣೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯೊಡೆಯನನ್ನು ಬೆದರಿಸಿ ಅವರ ಮನೆಯಲ್ಲಿದ್ದ ಬಂಗಾರ, ಬೆಳ್ಳಿ, ನಗದು ಹಣವನ್ನು ದರೋಡೆ ಮಾಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕಚೇರಿ ಪ್ರಾಂಗಣದಲ್ಲಿರುವ ಸಿಬ್ಬಂದಿಯೊಬ್ಬರ ಕ್ವಾರ್ಟರ್ಸ್‍ದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಗಿಲು ಕೀಲಿ ಒಡೆದು ಒಳಹೊಕ್ಕಿ ಅಲ್ಲಿಯೂ ಸಹ ಆಭರಣಗಳು ಮತ್ತು ಹಣವನ್ನು ಕದ್ದೊಯ್ದಿದ್ದಾರೆ.

ದರೋಡೆ:- ಆನೆಗುಂದಿ ಬಡಾವಣೆಯಲ್ಲಿ ಮನೆ ಮಾಡಿರುವ ಎಲ್‍ಐಸಿ ಡೆವಲಪಮೆಂಟ್ ಆಫೀಸರ್ ಆಗಿರುವ ಮಂಜುನಾಥ ಕೆ. ಶಾಸ್ತ್ರಿ ಅವರ ಮನೆಗೆ ಮಧ್ಯರಾತ್ರಿ 3.15ರ ಸುಮಾರಿಗೆ ಅವರ ಮನೆ ಮುಂಬಾಗಿಲಿನ ಇಂಟರ್‍ಲಾಕ್ ಅನ್ನು ಮುರಿದು ಒಳಪ್ರವೇಶಿಸಿದ ನಾಲ್ವರು ಕಳ್ಳರು ಮಂಜುನಾಥ ಅವರಿಗೆ ಹೆದರಿಸಿ ಲೂಟಿಗೆ ಅಣಿಯಾದರು. ಇದಕ್ಕೆ ಪ್ರತಿರೋಧಿಸಿದ ಮಂಜುನಾಥ ಅವರ ತಲೆಗೆ ಕಟ್ಟಿಗೆಯಿಂದ ಏಟು ನೀಡಿದರು. ಇದರಿಂದ ಹೌಹಾರಿದ ಮಂಜುನಾಥ ದಂಪತಿಗಳು ಅನಿವಾರ್ಯವಾಗಿ ಕಳ್ಳರಿಗೆ ತಮ್ಮ ಕಪಾಟಿನ ಕೀಲಿಕೈ ಅನ್ನು ನೀಡಿದರು.
ಹಿಂದಿಯಲ್ಲಿ ಕೆಲವೇ ಮಾತುಗಳಾಡುತ್ತಿದ್ದ ಆ ಕಳ್ಳರು ಕಪಾಟಿನಲ್ಲಿದ್ದ 177 ಗ್ರಾಂ ಬಂಗಾರದ ಆಭರಣಗಳು, 80 ಗ್ರಾಂ ಬೆಳ್ಳಿ ಆಭರಣ, 1200 ರೂ. ನಗದು ಮೊತ್ತವನ್ನು ತೆಗೆದುಕೊಂಡು ಮಾತ್ರವಲ್ಲದೇ ಶಾಸ್ತ್ರೀಯವರ ಎರಡೂ ಮೊಬೈಲ್‍ಗಳನ್ನು ಪಡೆದರು. ಅರ್ಧ ಗಂಟೆಯ ಒಳಗಾಗಿ ಕಳ್ಳರು ದರೋಡೆ ಪ್ರಕ್ರಿಯೆ ಮುಗಿಸಿ ಬೈಕ್ ಕೀಲಿಕೈ ಪಡೆದು ಆ ಬೈಕ್ ಅನ್ನು ತೆಗೆದುಕೊಂಡು ಪರಾರಿಯಾದರು.

ಕಳ್ಳತನ:- ಸಣ್ಣ ನೀರಾವರಿ ಇಲಾಖೆಯ ಪ್ರಾಂಗಣದಲ್ಲಿ ವಸತಿಗೃಹದಲ್ಲಿರುವ ಇಲಾಖೆಯ ಅಟೆಂಡರ್ ಸೈಯದ ಅವರ ಕುಟುಂಬ ಮನೆಯಲ್ಲಿ ಇಲ್ಲದಿರುವುದರಿಂದ ಮುಂಬಾಗಿಲ ಚಿಲಕ ಒಡೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಕೊಠಡಿಯಲ್ಲಿದ್ದ ಕಪಾಟ್ ಅನ್ನು ತೆರೆದು ಅದರಲ್ಲಿದ್ದ ಬಂಗಾರ, ಬೆಳ್ಳಿ ಹಾಗೂ ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ತಮ್ಮ ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಸೋಮವಾರ ಮಧ್ಯಾಹ್ನ ಕೊಪ್ಪಳಕ್ಕೆ ಹೋಗಿದ್ದ ಸೈಯದ ಕುಟುಂಬದವರ ಮಂಗಳವಾರ ಬೆಳಗಿನ ಜಾವ 6 ಗಂಟೆಗೆ ಮನೆಗೆ ಮರಳಿದಾಗ ತಮ್ಮ ಮನೆಯಲ್ಲಿ ಕಳ್ಳತನವಾಗಿರುವುದು ಕಂಡು ಬಂದಿತು. ಮಕ್ಕಳ ಕಿವಿಯೋಲೆ ಹಾಗೂ ಮೊದಲಾದ ಸಣ್ಣ ಆಭರಣಗಳು 20 ಗ್ರಾಂ, 11 ಬೆಳ್ಳಿ ದೀಪಗಳೊಂದಿಗೆ ಒಟ್ಟು 400 ಗ್ರಾಂ ಬೆಳ್ಳಿ ಹಾಗೂ 20 ಸಾವಿರ ರೂ. ನಗದು ಕದ್ದೊಯ್ದಿದ್ದಾರೆ.

ಪೊಲೀಸ್ ಕಾರ್ಯಪ್ರವೃತ್ತ:- ದರೋಡೆ ಹಾಗೂ ಕಳ್ಳತನದ ವಿಷಯ ತಿಳಿದ ತಕ್ಷಣ ಸ್ಥಳೀಯ ಪೊಲೀಸ್ ವ್ಯವಸ್ಥೆಯು ಸಿಪಿಐ ಸುಂದರೇಶ ಹೊಳೆಣ್ಣವರ ಹಾಗೂ ಪಿಎಸ್‍ಐ ಆನಂದಮೂರ್ತಿ ಇವರ ನೇತೃತ್ವದಲ್ಲಿ ಕಾರ್ಯಪ್ರವೃತ್ತವಾಯಿತು. ಪಟ್ಟಣದಾದ್ಯಂತ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅವಲೋಕನ ಮಾಡಿ ಮಾಹಿತಿ ಕಲೆ ಹಾಕುವ ಕಾರ್ಯ ಆರಂಭಿಸಿದರು. ಬೆಳಿಗ್ಗೆ ಕಾರವಾರದಿಂದ ಪೊಲೀಸ್ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಹ ಬಂದು ಪ್ರಕ್ರಿಯೆ ಮುಗಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಇವರು ಸಹ ಹಳಿಯಾಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

loading...