‘ಹೆಚ್‏ಡಿಕೆ 5 ವರ್ಷ ಸಿಎಂ’ ಘೋಷಣೆಗೆ ಕಾಂಗ್ರೆಸ್ ಮುಖಂಡರಿಂದ ಅಸಮಾಧಾನ!

0
26
ನವದೆಹಲಿ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿರುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಮೈತ್ರಿ ಸರ್ಕಾರದ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆಸಿ ವೇಣುಗೋಪಾಲ್ ಅವರು ಈ ವೇಳೆ ಮುಂದಿನ ಐದು ವರ್ಷಗಳ ಕಾಲ ಹೆಚ್ ಡಿ ಕುಮಾರಸ್ವಾಮಿ ಅವರೇ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದರು.
ಇದರಿಂದ ಕಾಂಗ್ರೆಸ್ ನ ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಕೇಂದ್ರ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರು ಕೆಸಿ ವೇಣುಗೋಪಾಲ್ ಅವರನ್ನು ಈ ಸಂಬಂಧ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಮೈತ್ರಿ ಸರ್ಕಾರ ಕುರಿತ ಒಪ್ಪಂದದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದರ ಕುರಿತು ಚರ್ಚಿಸಿರಲಿಲ್ಲ. ಆದರೆ ಇದೀಗ ನೀವು ಕುಮಾರಸ್ವಾಮಿ ಐದು ವರ್ಷದ ಸಿಎಂ ಎಂದು ಘೋಷಿಸಿದ್ದೀರಾ, ಜೆಡಿಎಸ್ ಗೆ ಹಣಕಾಸು ಖಾತೆ ಕೊಟ್ಟು ಅವರನ್ನು ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಸಬೇಕು ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ 79 ಸ್ಥಾನಗಳನ್ನು ಪಡೆದಿದ್ದು ಕೇವಲ 37 ಸ್ಥಾನಗಳನ್ನು ಪಡೆದಿದರುವ ಜೆಡಿಎಸ್ ಗೆ ಹಣಕಾಸು ಖಾತೆ ಮತ್ತು ಸಿಎಂ ಸ್ಥಾನ ಎರಡನ್ನು ಬಿಟ್ಟುಕೊಟ್ಟರೆ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಕಟ್ಟುವುದು ಹೇಗೆ? ಮುಂದಿನ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ನ ಪರಿಸ್ಥಿತಿ ಏನಾಗುವುದೋ ಗೊತ್ತಿಲ್ಲ ಎಂದು ವೇಣುಗೋಪಾಲ್ ಅವರನ್ನು ಕೇಳಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಕುರಿತಂತೆ ನಿನ್ನೆಯ ಒಪ್ಪಂದದ ಕುರಿತಂತೆ ಹೈಕಮಾಂಡ್ ಸಮ್ಮತಿಯನ್ನು ಪಡೆಯುವ ಸಲುವಾಗಿ ವೇಣುಗೋಪಾಲ್ ಅವರು ದೆಹಲಿಗೆ ತೆರಳಿದ್ದರು.
loading...