ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ, ಕಳಪೆಯಾಗಿದೆ: ಅಬ್ಬಿಗೇರಿ ಆರೋಪ

0
16
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಪಟ್ಟಣದಲ್ಲಿ ಕೈಗೊಂಡಿರುವ ಹೆದ್ದಾರಿ ರಸ್ತೆ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದೆ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಆರೋಪಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಹೆದ್ದಾರಿ ರಸ್ತೆ ಕಾಮಗಾರಿ ಪರಿಶೀಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೆಇಬಿ ಬಳಿ ಇರುವ ಸೇತುವೆ ಮೇಲೆ ನಿಲ್ಲುತ್ತಿರುವ ನೀರನ್ನು ಹಳ್ಳದಲ್ಲಿರುವ ಪ್ರತ್ಯೇಕ ಚರಂಡಿಗೆ ಹೋಗುವಂತೆ ಮಾಡಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದ್ದೇವು. ಆದರೆ, ಸೇತುವೆ ಮೇಲಿನ ನೀರು ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದರು.

ಕಾಮಗಾರಿ ಮಾಡದಂತೆ ನೋಟಿಸ್ ನೀಡಿದರೂ ಗುತ್ತಿಗೆದಾರರು ತಡರಾತ್ರಿ ಕಾಮಗಾರಿ ಮಾಡುತ್ತಿದ್ದಾರೆ. ಯಾರ ಮಾತಿಗೂ ಅವರು ಬೆಲೆ ಕೊಡುತ್ತಿಲ್ಲ. ರಸ್ತೆಯ ಎರಡು ಬದಿಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸಿಲ್ಲ. ನೀರು ಪೂರೈಸುವ ಬೃಹತ್ ಪೈಪುಗಳ ಮೇಲೆ ಚರಂಡಿ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಆದರೆ ಪೈಪ್‍ಲೈನ್ ದುರಸ್ಥಿ ಮಾಡುವುದಾದರು ಹೇಗೆ? ಎಂದು ಅವರು ಪ್ರಶ್ನೆಸಿದರು.
ಪುರಸಭೆ ಸ್ಥಾಯಿ ಕಮಿಟಿ ಅಧ್ಯಕ್ಷ ಪ್ರಭು ಅಬ್ಬಿಗೇರಿ ಮಾತನಾಡಿ, ಹೆಸರೂರ ಸರ್ಕಲ್‍ನಿಂದ ಬ್ಯಾಲವಾಡಗಿ ಸರ್ಕಲ್ ವರೆಗಿನ ರಸ್ತೆ ವಿಭಜಕವು ಕಳಪೆ ಮಟ್ಟದಲ್ಲಿದೆ. ವಿಭಜಕದ ಮಧ್ಯೆ ಹೂಗಿಡ, ಶೋ ಗಿಡಗಳನ್ನು ಬೆಳೆಸುವುದಕ್ಕೆ ಫಲವತ್ತಾದ ಮಣ್ಣನ್ನು ಹಾಕಬೇಕು. ಆದರೆ, ಗುತ್ತಿಗೆದಾರರು ದೊಡ್ಡ ದೊಡ್ಡ ಕಲ್ಲು ಮಿಶ್ರಿತ ಮಣ್ಣನ್ನು ಹಾಕಿದ್ದಾರೆ ಎಂದು ಆರೋಪಿಸಿದರು.

ಸದಸ್ಯ ಬಸವರಾಜ ರಾಮೇನಹಳ್ಳಿ ಮಾತನಾಡಿ, ರಸ್ತೆಯ ಎರಡು ಬದಿಯ ಮುಖ್ಯ ಚರಂಡಿ ಕಾಮಗಾರಿ ಅವೈಜ್ಞಾನಿಕತಿಯಿಂದ ಕೂಡಿದೆ. ವಾರ್ಡ್‍ಗಳಿಂದ ಮುಖ್ಯ ಚರಂಡಿಗೆ ಸಂಪರ್ಕ ಕಲ್ಪಿಸುವ ಕಿರುಚರಂಡಿಗಳು ಕೆಳ ಮಟ್ಟದಲ್ಲಿದ್ದು ಮುಖ್ಯಚರಂಡಿಗೆ ನೀರು ಸೇರದೆ ವಾರ್ಡ್‍ನ ರಸ್ತೆಯುದ್ದಕ್ಕೂ ನೀರು ನಿಲ್ಲುವಂತ ಸ್ಥಿತಿ ಈಗಾಗಲೆ ನಿರ್ಮಾಣವಾಗಿದೆ. ಇಷ್ಟೆಲ್ಲ ಕಳಪೆ ಕಾಮಗಾರಿ ನಡೆಯುತ್ತದ್ದರೂ ಕೆಆರ್‍ಡಿಸಿಎಲ್‍ನ ಅಭಿಯಂತರರು ಮೌನವಾಗಿರುವುದು ನೋಡಿದರೆ ಗುತ್ತಿಗೆದಾರರೊಂದಿಗೆ ಅವರು ಶಾಮೀಲಾಗಿದ್ದಾರೆ ಎನ್ನುವುದು ಮಲ್ನೋಟಕ್ಕೆ ತಿಳಿದು ಬರುತ್ತದೆ ಎಂದು ದೂರಿದರು. ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎಸಿಬಿ ಹಾಗೂ ಕೋರ್ಟ್ ಮೋರೆ ಹೋಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಬಸವರಾಜ ನರೇಗಲ್ಲ, ಸದಸ್ಯರಾದ ಪರುಶುರಾಮ ಕರಡಿಕೊಳ್ಳ, ವೀರೇಶ ಸಜ್ಜನರ, ಲಿಂಗರಾಜಗೌಡ ಪಾಟೀಲ, ಪಕ್ರುಸಾಬ್ ಹಾರೋಗೇರಿ, ಮುಖಂಡರಾದ ಮಂಜುನಾಥ ಇಟಗಿ, ಶ್ರೀನಿವಾಸ ಅಬ್ಬಿಗೇರಿ, ದೇವು ಹಡಪದ, ನಾಗರಾಜ ಗುಡಿಮನಿ, ಮೊದಲಾದವರು ಇದ್ದರು.

loading...