ಹೈಟೆಕ್‌ ಅಂಗನವಾಡಿಯಲ್ಲಿ ನೀರಿಲ್ಲ

0
14
loading...

ಅಮರ ಇಂಗಳೆ
ತೇರದಾಳ: ಸುಸಜ್ಜಿತ ಕಟ್ಟಡ, ಅದರ ತುಂಬ ಆಟವಾಡಿಕೊಂಡು ಓದು-ಬರಹ ಕಲಿಯುವ ಮಕ್ಕಳು, ಹಸಿವಾದರೆ ಊಟ ಕೊಡಲು ಸಹಾಯಕಿ(ಹೆಲ್ಪರ್‌) ಇಲ್ಲ, ಅದು ಬಿಡಿ ಕುಡಿಯಬೇಕೆಂದರು ನೀರು ಇಲ್ಲ. ದೂರದಿಂದ ಕುಡಿಯಲು ನೀರು ತರಲು ಅಂಗನವಾಡಿ ಕಾರ್ಯಕರ್ತೆಯೇ ಹೋಗಿ ತರಬೇಕಾದ ಪರಿಸ್ಥಿತಿ ಕಂಡುಬರುವುದು ತೇರದಾಳ ಪಟ್ಟನ ವ್ಯಾಪ್ತಿಯ ಕಲೂತಿ ನಗರದ ಅಂಗನವಾಡಿ ಸಂಖ್ಯೆ 26ರಲ್ಲಿ.
ಹೆಲ್ಪರ್‌ ಇಲ್ಲ: ಕಟ್ಟಡವಿಲ್ಲ ಎಂದು ಇಲ್ಲಿಯವರೆಗೆ ಹಲವುತ್ತಿದ್ದ ಜಾಗದಲ್ಲಿ ನೂತನವಾಗಿ ಹೈಟೆಕ್‌ ಅಂಗನವಾಡಿ ಕಟ್ಟಿಸಲಾಯಿತು. ಆದರೆ ಪ್ರಯೋಜನವೇನು. ಮಕ್ಕಳನ್ನು ಕರೆತರಲು ಸುಮಾರು 7 ವರ್ಷಗಳಿಂದ ಸಹಾಯಕಿ ಇಲ್ಲ. ಖಾಲಿ ಹುದ್ದೆಯನ್ನು ಭರ್ತಿ ಮಾಡುವ ಇರಾದೇ ಇಲಾಖೆಗಿದ್ದಂತಿಲ್ಲ. ಇರುವ ಕಾರ್ಯಕರ್ತೆ ಮಕ್ಕಳನ್ನು ಕರೆತರಲು ಅತ್ತ ಹೋದರೆ ಇಲ್ಲಿಗೆ ಬಂದ ಮಕ್ಕಳು ಯಾರು ಇಲ್ಲವೆಂದು ಮರಳಿ ಹೋಗುತ್ತಾರೆ. ನೀರು ಇಲ್ಲ: ನೂತನ ಹೈಟೆಕ್‌ ಕಟ್ಟಡದಲ್ಲಿ ಎಲ್ಲ ವ್ಯವಸ್ಥೆ ಇದ್ದರು ಸಹ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಶೌಚಾಲಯದ ಬಳಕೆಯಾಗುತ್ತಿಲ್ಲ. ನೀರಿಗೆಂದು ಅಳವಡಿಸಲಾದ ಸಿಂಟೆಕ್ಸ್‌ ಖಾಲಿಯಿದ್ದ ಕಾರಣ ಮೊನ್ನೆ ಬೀಸಿದ ಮಳೆಗಾಳಿಗೆ ಉರುಳಿಬಿದ್ದು ನೇತಾಡುತ್ತಿದೆ. ಮಾತೃಪೂರ್ಣ ಯೋಜನೆಯ ಗರ್ಭಿಣಿ, ಬಾಣಂತಿಯರು ಊಟಕ್ಕೆ ಬರುವಾಗ ತಾವೇ ನೀರಿನ ಬಾಟಲಿಗಳನ್ನು ತರುತ್ತಾರೆ. ಎಲ್ಲ ವ್ಯವಸ್ಥೆ ಹೊಂದಿರುವ ಇದಕ್ಕೆ ಪಕ್ಕದಲ್ಲಿಯೇ ಇರುವ ನೀರಿನ ಪೈಪ್‌ಗೆ ಕನೆಕ್ಷನ್‌ ಕೊಟ್ಟರೆ ನೀರು ಕೂಡ ಸಿಗುತ್ತದೆ ಆದರೆ ಪುರಸಭೆ ಮಾತ್ರ ಇದರ ಗೋಜಿಗೆ ಹೋಗಿಲ್ಲ.
ಮೈದಾನ ತಗ್ಗುತಗ್ಗು: ಅಂದವಾದ ಕಟ್ಟಡದ ಮುಂದೆ ತ್ರಿಕೋನಾಕಾರದ ಮೈದಾನವಿದ್ದು, ಅದು ತಗ್ಗು ಗುಂಡಿಗಳಿಂದ ಕೂಡಿದೆ, ಇದರಿಂದ ಮಕ್ಕಳು ಅಲ್ಲಿ ಆಟವಾಡಲು ಅಸಾಧ್ಯವಾಗಿದೆ.
ಕಂಪೌಂಡ್‌ ಅವಶ್ಯವಿದೆ: ತ್ರಿಕೋನಾಕಾರದ ಈ ಮೈದಾನದ ಎರಡು ಬದಿಯಲ್ಲಿ ರಸ್ತೆಗಳಿದ್ದು. ಇದರಿಂದ ಅಡ್ಡಾಡುವ ವಾಹನಗಳಿಂದ ಇಂದಲ್ಲ ನಾಳೆ ಮಕ್ಕಳಿಗೆ ಅಪಾಯವಿದೆ. ಆದ್ದರಿಂದ ಇದಕ್ಕೊಂದು ಕಂಪೌಂಡ್‌ ಕಟ್ಟಿಸಿಕೊಡಲು ಪುರಸಭೆ ಮುಂದಾಗಬೇಕಿದೆ.
ಒಟ್ಟಾರೆ ಹೈಟೆಕ್‌ ಆದರೂ ಅಷ್ಟೇ ಹೈಟೆಕ್‌ ಸಮಸ್ಯೆಗಳನ್ನು ಹೊಂದಿರುವ ಈ ಅಂಗನವಾಡಿಗೆ ಸಂಬಂಧಿಸಿದವರು ಕಾಯಕಲ್ಪ ಕಲ್ಪಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.

loading...