ಹೊಲಗಾಲುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲು ಶಾಸಕರ ಸೂಚನೆ

0
20
loading...

ಮುದ್ದೇಬಿಹಾಳ : ಕೃಷ್ಣಾ ಮೇಲ್ದಂಡೆ ಯೋಜನೆಯ(ಎಎಲ್‌ಬಿಸಿ) ಎಡದಂಡೆ ಕಾಲುವೆಯಡಿ ಶೇ.70ರಷ್ಟು ಭಾಗದಲ್ಲಿ ನೀರಾವರಿಯೇ ಆಗಿಲ್ಲ.ಆದರೆ ಇಲಾಖೆಯ ಮಾಹಿತಿ ಪ್ರಕಾರ ಶೇ.100ರಷ್ಟು ನೀರಾವರಿ ಆಗಿದೆ ಎಂದು ತಪ್ಪು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗಿದ್ದು ಮೊದಲು ಈ ಭಾಗದಲ್ಲಿ ಹೊಲಗಾಲುವೆಗಳ(ಎಫ್‌ಐಸಿ)ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕೆಬಿಜೆಎನ್‌ಎಲ್‌ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೆಬಿಜೆಎನ್‌ಎಲ್‌ ಕಛೇರಿ ಗುತ್ತಿಗೆದಾರರ ಸಲುವಾಗಿ ಅಲ್ಲ. ರೈತರ ಸಲುವಾಗಿ ನೀವೆಲ್ಲ ಕೆಲಸ ಮಾಡಬೇಕು.ಎಎಲ್‌ಬಿಸಿಯ 68 ಕಿ.ಮೀದವರೆಗೆ ಕಾಲುವೆ ಇದ್ದರೂ ಕೊನೆಯ ಭಾಗದವರೆಗೆ ನೀರು ಬರುವುದಿಲ್ಲ.15 ವರ್ಷದಲ್ಲಿ 4.8 ಟಿಎಂಸಿ ನೀರನ್ನು ಎಷ್ಟು ಪ್ರಮಾಣದಲ್ಲಿ ಎತ್ತುವಳಿ ಮಾಡಲಾಗಿದೆ ಎಂದು ಪರಿಶೀಲನೆ ನಡೆಸಬೇಕು ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. 63 ಕೋಟಿ ರೂ.ಗಳ ವೆಚ್ಚದಲ್ಲಿ ಎಎಲ್‌ಬಿಸಿಯ ಮುಖ್ಯ ಹಾಗೂ ಉಪ ಕಾಲುವೆಗಳ ನವೀಕರಣಕ್ಕೆ ಟೆಂಡರ್‌ ಕರೆಯಲಾಗಿದೆ ಎಂದು ಮಾಹಿತಿ ನೀಡುತ್ತಿದ್ದಂತೆ ಮೊದಲು ಹೊಲಗಾಲುವೆಗಳ ನಿರ್ಮಾಣಕ್ಕೆ ಒತ್ತು ನೀಡಿ.ಆಮೇಲೆ ಮುಖ್ಯಕಾಲುವೆಗಳು ಹಾಗೂ ಉಪ ಕಾಲುವೆಗಳ ಸುಧಾರಣೆಗೆ ಒತ್ತು ನೀಡಬೇಕು ಎಂದು ಹೇಳಿದರು. ಎಸಿ ಚೇಂಬರ್‌ನಲ್ಲಿ ಕುಳಿತು ಕೆಲಸ ಮಾಡುವವರು ಹೇಳಿದ್ದನ್ನು ಕೇಳುವವರು ನಾವಲ್ಲ. ಕಾಲುವೆ ಹಾಗೂ ಆಣೆಕಟ್ಟುಗಳಿಗಾಗಿ ತಮ್ಮ ಮನೆ,ಜಮೀನುಗಳನ್ನು ರೈತರು ಕಳೆದುಕೊಂಡಿದ್ದಾರೆ.ಅವರ ಹೊಲಗಳಿಗೆ ನೀರು ಕೊಡಲಾಗದಿದ್ದರೆ ನಾವೇ ಕೆಬಿಜೆಎನ್‌ಎಲ್‌ ಕಛೇರಿಯನ್ನು ಬಂದ್‌ ಮಾಡಿಸುತ್ತೇವೆ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಸಿದರು. ತಾಲೂಕಿನಲ್ಲಿ 21 ಕೆರೆಗಳನ್ನು ಕಾಲುವೆಗಳ ಮೂಲಕ ನೀರು ತುಂಬಿಸಲು ಯೋಜನೆ ಸಿದ್ಧಪಡಿಸಿ.ಗೆದ್ದಲಮರಿ,ಮಡಿಕೇಶ್ವರ,ಮಾದಿನಾಳ,ಹುಲಗಬಾಳ,ಹೊಕ್ರಾಣಿ ಕೆರೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು ಇವುಗಳನ್ನು ಒಮ್ಮೆ ಭರ್ತಿ ಮಾಡಿದರೆ ಅರ್ಧಕ್ಕಿಂತ ಹೆಚ್ಚು ಪ್ರದೇಶ ನೀರಾವರಿ ಆಗುತ್ತದೆ.ಬೃಹತ್‌ ನೀರಾವರಿ ಇಲಾಖೆಯಿಂದ ದೊಡ್ಡ ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಿದ್ದಪಡಿಸಿ ಎಂದು ಹೇಳಿದಲ್ಲದೇ ಗೆದ್ದಲಮರಿ ಕೆರೆಯನ್ನು ಪಿಕ್‌ನಿಕ್‌ ಸ್ಪಾಟ್‌ ಆಗಿ ರೂಪಿಸಲು ಅಗತ್ಯ ಯೋಜನೆ ತಯಾರಿಸಿ ಎಂದರು.
ಸಭೆಯಲ್ಲಿ ಕೆಬಿಜೆಎನ್‌ಎಲ್‌ ಇಇ ಎಂ.ಸಿ.ಚೆಬ್ಬಿ, ಎಇಇ ಎಂ.ಸಿ.ಡೊಳ್ಳಿ, ಬಿ.ಎಸ್‌.ಪ್ಯಾಟಿಗೌಡರ, ಎಂ.ಆರ್‌.ಬಾಗವಾನ, ಜೆ.ಎನ್‌.ಜೋತಗುಂಡ,ಆರ್‌.ಕೆ.ರಾಠೋಡ,ಎಸ್‌.ಡಿ.ಬಿರಾದಾರ, ಕೆ.ಎಂ.ವಾಲೀಕಾರ,ಬಿ.ಎಚ್‌.ಬಾರಕೇರ, ಜಿ.ಬಿ.ಗಿರೀಶ, ಎನ್‌.ಬಿ.ನಾಡಗೌಡರ ಮತ್ತಿತರರು ಇದ್ದರು.
ನಾನು ದಡ್ಡನಿದ್ದೇನೆ, ನೀವಾದ್ರೂ ಜಾಣರಲ್ಲವೇ: ಅಧಿಕಾರಿಗಳಿಗೆ ಪ್ರಶ್ನೆ ತಾಲೂಕಿನ 21 ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ನಡೆದ ಚರ್ಚೆ ವೇಳೆ ಅಧಿಕಾರಿ ಎಂ.ಆರ್‌.ಬಾಗವಾನ ಅವರು ಶಾಸಕರಿಗೆ ಕಾನೂನಿನ ಕುರಿತು ತಿಳಿಸಲು ಮುಂದಾಗುತ್ತಿದ್ದಂತೆ, ನಾನು ಈ ವಿಷಯದಲ್ಲಿ ದಡ್ಡನಿದ್ದೇನೆ ನೀವಾದ್ರೂ ಇಂಜಿನಿಯರ್ಸ್‌ ಇದ್ದೀರಿ ತಾನೇ, ಜಾಣರಲ್ಲವೇ ಕೆರೆಗಳನ್ನು ಹೇಗೆ ತುಂಬಿಸೋದು ಎಂದು ತಿಳಿಸಿ ಎಂದು ಶಾಸಕ ನಡಹಳ್ಳಿ ಪ್ರಶ್ನಿಸಿದರು. ಒಂದು ವೇಳೆ ಕೆಬಿಜೆಎನ್‌ಎಲ್‌ ಮೂಲಕ ಕೆರೆ ತುಂಬಿಸದೇ ನಿರ್ಲಕ್ಷ್ಯ ವಹಿಸಿದ್ದೇ ಆದಲ್ಲಿ ನಾನು ರೈತರ ಹಿತ ಕಾಪಾಡಲು ಶಾಸಕರ ನಿಧಿ ಬಳಸಿ ಮುಖ್ಯಕಾಲುವೆಗಳನ್ನು ಒಡೆದು ಅಲ್ಲಿ ಗೇಟ್‌ ಅಳವಡಿಸಿ ಕೆರೆಗಳನ್ನು ತುಂಬಿಸಬೇಕಾಗುತ್ತದೆ ಎಂದು ಶಾಸಕ ನಡಹಳ್ಳಿ ಅಧಿಕಾರಿಗಳಿಗೆ ಹೇಳಿದರು.

loading...