371ಜೆ ಸಂಪೂರ್ಣ ಜಾರಿಗಾಗಿ ಚುನಾವಣೆಗೆ ಸ್ಪರ್ಧೆ: ರಜಾಕ್

0
30
loading...

ಕುಷ್ಟಗಿ: ಹೈದ್ರಾಬಾದ್-ಕರ್ನಾಟಕ ಪ್ರದೇಶವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯೇ ದೊಡ್ಡ ಪಿಡುಗು ಆಗಿದೆ. ಮತ್ತು 371ಜೆ ಕಲಂಗೆ ರಾಜ್ಯ ಸರಕಾರದಿಂದ ಹಾಗೂ ನೇಮಕಾತಿ ವಿಷಯದಲ್ಲಿ ಅನೇಕ ಅನ್ಯಾಯವಾಗುತ್ತಿದ್ದು ಇದರ ಸಂಪೂರ್ಣ ಹಾಗೂ ಸಮರ್ಪಕ ಜಾರಿಗಾಗಿ ನಾನು ಅವಿರತ ಶ್ರಮ ಪಡುತ್ತಿದ್ದು ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕಾಗಿದ್ದು ಇದಕ್ಕಾಗಿ ನಾನು ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ರಜಾಕ್ ಉಸ್ತಾದ್ ಹೇಳಿದರು.

ಪಟ್ಟಣದ ರೇಣುಕಾಚಾರ್ಯ ಕಲ್ಯಾನ ಮಂಟಪದಲ್ಲಿ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಹಾಗೂ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.
ಹೈ-ಕ ಪ್ರದೇಶದಲ್ಲಿ ಅನೇಕ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಹೆಚ್ಚು ವಿದ್ಯಾವಂತರಾಗಿದ್ದರೂ ಯಾವುದೇ ಕಾರಣಕ್ಕೆ ಇಲ್ಲಿನ ಭಾಗದವರಿಗೆ ಅನ್ಯಾಯವಾಗುತ್ತಾ ಬಂದಿರುವುದು ಕಟು ಸತ್ಯವಾಗಿದೆ. ಈ ಪ್ರದೇಶದಲ್ಲಿ ಯಾವುದೇ ದೊಡ್ಡ ಮಟ್ಟದ ಕೈಗಾರಿಕೆಗಳಿಲ್ಲ, ಬೃಹತ್ ಉದ್ದಿಮೆಗಳು ಇಲ್ಲ, ಅಲ್ಲದೇ ಯಾವುದೇ ಈಟಿ ಬಿಟಿ ಕಂಪನಿಗಳು ಸಹ ಅತ್ಯಂತ ಕಡಿಮೆಇದ್ದು ಇಲ್ಲಿ ನಿರುದ್ಯೋಗ ಹೆಚ್ಚಿನ ಮನೆ ಮಾಡಿದೆ. ಒಟ್ಟಾರೆಯಾಗಿ 1.30 ಕೋಟಿ ಹೈ-ಕ ಭಾಗದ ಜನಸಂಖ್ಯೆಯಿದ್ದು 371 ಕಲಂ ಜಾರಿಗಿಂತ ಮೊದಲು ಇದರಲ್ಲಿ ಕೇವಲ ರಾಜ್ಯ ಸರಕಾರದ ನೌಕರಿ ಗಿಟ್ಟಿಸುವವರು 3.7% ಮಾತ್ರ ಇತ್ತು. ಆದರೆ ಈಗ 371ಜೆ ಒಂದು ವರದಾನವಾಗಿದೆಯಾದರೂ ಅದರಲ್ಲಿ ಅನೇಕ ಲೋಪದೋಷಗಳು ಇದೆ. ಆದರೂ ನಮಗೆ ಅನ್ಯಾಯವಾಗುವುದು ನಿಂತಿಲ್ಲ. ಸರಕಾರದ ಅಧಿಕಾರಿಗಳು ಪ್ರತಿಯೊಂದು ಅಧಿಸೂಚನೆಯಲ್ಲೂ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಸುಮಾರು 21 ಇಲಾಖೆಗಳಲ್ಲಿ ಕೂಡ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದ್ದರೂ ಧ್ವನಿಯೆತ್ತಲೂ ಯಾರೂ ಇಲ್ಲ. ನಾನು ಈ ಅನ್ಯಾಯದ ವಿರುದ್ಧ ಧ್ವನಿಯಾಗುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೇ ನಮ್ಮದೇ ಭಾಗದಲ್ಲಿರುವ ಖಾರ್ಖಾನೆಗಳಲ್ಲಿ ನಮಗೇ ಕೆಲಸ ನೀಡುವುದಿಲ್ಲ. ಇಂಥಹ ದಾರುಣ ಸ್ಥಿತಿಯಲ್ಲಿ ನಾವಿದ್ದೇವೆ.

ನನಗೆ ನೀವು ಮತ ನೀಡಿದ್ದೇ ಆದಲ್ಲಿ ಈ ಭಾಗದಲ್ಲಿ ಕೈಗಾರಿಕೆಗಳು ಉದ್ದಿಮೆಗಳು, ಬೃಹತ್ ಪ್ರಮಾಣದ ತಾಂತ್ರಿಕ ಕಂಪನಿಗಳು ಈ ಭಾಗದಲ್ಲಿ ನೆಲೆಯೂರಿ ಇಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ನಾನು ಸಂಪೂರ್ಣ ಪ್ರಯತ್ನ ಮಾಡುತ್ತೇನೆ. ಮುಂದಿನ 10 ವರ್ಷಗಳಲ್ಲಿ ಹೈ-ಕ ಭಾಗವು ಮುಂದುವರೆದ ಭಾಗವೆಂದು ಹೆಸರು ಪಡೆಯುವ ಹಾಠಗೆ ಮಾಡುವುದು ನನ್ನ ಗುರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೈ.ಕ.ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ, ತಾಲೂಕು ಅಧ್ಯಕ್ಷ ನಟರಾಜ ಸೋನಾರ, ಶಿವಕುಮಾರ ಕುಕನೂರು, ಭೀಮರಡ್ಡಿ ಶ್ಯಾಡಲಗೇರಿ, ಮರ್ದಾನಸಾಬ ಕೊತ್ವಾಲ್, ವೈ.ಜೆ.ಪಾಟೀಲ್, ಸಂತೋಷ ದೇಶಪಾಂಡೆ, ಪರಸಪ್ಪ ಪಂಚಮ್, ಮಹಾಂತೇಶ ಮುದೇನೂರು, ರಮೇಶ ತುಪ್ಪದ್, ಪ್ರಭುರಾಜ ಹೊಕ್ಕಳದ್ , ರವೀಂದ್ರ ಬಾಕಳೆ ಇತರರು ಇದ್ದರು.


ಸರಕಾರದ ಹಾಗೂ ಇನ್ನಿತರ ನೇಮಕಾತಿ ಸಂದರ್ಭದಲ್ಲಿ ಹೈದ್ರಾಬಾದ್-ಕರ್ನಾಟಕ ಭಾಗದರಿಗೆ ಅನ್ಯಾಯವಾದಾಗ ಕೇಸ್ ನಡೆಯಲು ಹೈ-ಕ ಭಾಗದಲ್ಲಿಯೇ ಟ್ರಿಬ್ಯುನಲ್ ಸ್ಥಾಪನೆಯಾಗಬೇಕು. ನಮ್ಮ ಭಾಗದವರು ಬೆಂಗಳೂರಿನಂತ ನಗರಕ್ಕೆ ಹೋಗುವುದು ಬಹು ಕಷ್ಟವಾಗುತ್ತದೆ. ಆದ್ದರಿಂದ ನಮ್ಮ ಭಾಗದಲ್ಲೇ ಟ್ರಿಬ್ಯೂನಲ್ ಆಗಬೇಕು.

ರಜಾಕ್ ಉಸ್ತಾದ್, ಪಕ್ಷೇತರ ಅಭ್ಯರ್ಥಿ

loading...