ಅಂಗವಿಕಲರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ : ಆಯುಕ್ತ ಬಸವರಾಜ ಸೂಚನೆ

0
8
loading...

ಬಾಗಲಕೋಟೆ: ರಾಜ್ಯದಲ್ಲಿ ಎಲ್ಲ ಕ್ಷೇತ್ರ ಹಾಗೂ ಶಾಲಾ ಕಾಲೇಜುಗಳಲ್ಲಿ ವಿಕಲಚೇತನರಿದ್ದು, ಅವರವರ ಕಾರ್ಯಕ್ಷೇತ್ರ ವ್ಯಾಪ್ತಿಗನುಗುಣವಾಗಿ ಸಂಬಂಧಿಸಿದ ಇಲಾಖೆಗಳು ಅಂಗವಿಕಲರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯದ ಆಯುಕ್ತರಾದ ವಿ.ಎಸ್‌.ಬಸವರಾಜ ಅವರು ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರ ಜಾರಿಗೆ ತಂದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಅಲ್ಲದೇ ವಿವಿಧ ಇಲಾಖೆಗಳಡಿ ಬಿಡುಗಡೆಯಾದ ಅನುದಾನದಲ್ಲಿ ಶೇ.5 ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿರಿಸಿ, ಆ ಹಣದಿಂದ ಅಂಗವಿಕಲರಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸವಾಗಬೇಕು ಎಂದರು.
ಅಂಗವಿಕಲತೆಗೆ ಈ ಹಿಂದೆ 3 ಗುರುತುಗಳು ಮಾತ್ರ ನಿಗದಿಪಡಿಸಲಾಗಿತ್ತು, ಆದರೆ ಈಗ 21 ಗುರುತುಗಳನ್ನು ನಿಗದಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಅಂಗವಿಕಲರ ಪಾಲಕರ ಸಭೆ ಕರೆದು ಅಂಗವಿಕಲರಿಗೆ ಇರುವ ಹಕ್ಕುಗಳ ಮತ್ತು ಅವರಿಗೆ ಇರುವ ಸೌಲಭ್ಯಗಳ ಅರಿವು ಮೂಡಿಸುವ ಕೆಲಸವಾಗಬೇಕು. ಇದರ ಜೊತೆಗೆ ಅವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ತಿಳಿದುಕೊಂಡು ಕಲ್ಪಿಸುವ ಕೆಲಸವಾಗಬೇಕು ಎಂದರು. ಕೇವಲ ಒಂದೇ ಉದ್ದೇಶಗಳಿಗೆ ಅನುದಾನ ಖರ್ಚು ಮಾಡದೇ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದವುಗಳಿಗೆ ಖರ್ಚು ಮಾಡಬೇಕೆಂದು ತಿಳಿಸಿದರು. ಅಧಿಕಾರಿಗಳು ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸಿ ಅಂಗವಿಕಲರ ಅವಿವೃದ್ದಿ ಕಾರ್ಯವಾಗಬೇಕು ಎಂದರು.

ಜಿಲ್ಲೆಯಲ್ಲಿ 800 ಸಾವಿರ ಜನ ನಿರುದ್ಯೋಗಿ ಅಂಗವಿಕಲರಿದ್ದು, ಅವರಿಗೆ ಉದ್ಯೋಗ ಕಲ್ಪಿಸುವ ಕೆಲವಾಗಬೇಕಾಗಿದೆ. ಅಲ್ಲದೇ ಗ್ರಾಮ ಮಟ್ಟದಿಂದ ಹಿಡಿದು ನಗರದ ವ್ಯಾಪ್ತಿಯಲ್ಲಿ ಅಂಗವಿಕಲರ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಅಂಗವಿಕಲರ ಸಂಘ ಸಂಸ್ಥೆಗಳು ಸಭೆಗೆ ತಿಳಿಸಿದಾಗ ಉದ್ಯೋಗ ಸೌಲಭ್ಯಗಳನ್ನು ಕಲ್ಪಿಸಲಿಕ್ಕೆ ವಿವಿಧ ನಿಗಮಗಳಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಲ್ಲದೇ ಜಿಲ್ಲೆಯ ಅಂಗವಿಕಲರ ಮಾಹಿತಿ ಪಡೆದುಕೊಂಡು ವಿವಿಧ ಇಲಾಖೆಗಳ ಸಹಕಾರ ಪಡೆದು ಈಗಾಗಲೇ ಸೌಲಭ್ಯ ಪಡೆದ ಅಂಗವಿಕಲರ ಪಟ್ಟಿ ಪಡೆಯಬೇಕು. ಅಂದಾಗ ಮಾತ್ರ ಸೌಲಭ್ಯದಿಂದ ವಂಚಿತರಾದ ಅಂಗವಿಕಲರ ಫಲಾನುಭವಿಗಳ ಪಟ್ಟಿ ಸಿರುತ್ತದೆ. ಇದರಿಂದ ಅಂಗವಿಕಲರ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಬಸವರಾಜ ಶಿರೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...